ADVERTISEMENT

ಮಡಿಕೇರಿ: ಕಳವಿಗೆ ಜಿಗಣೆ ರಕ್ತವೇ ಸಾಕ್ಷಿ

8 ಪೊಲೀಸರ ಮನೆಯಲ್ಲಿ ₹ 1.5 ಲಕ್ಷ ಕಳವು, ಆರೋಪಿಗಳನ್ನು ಹಿಡಿಯಲು ₹ 15 ಲಕ್ಷ ವೆಚ್ಚ!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 2:33 IST
Last Updated 20 ಆಗಸ್ಟ್ 2025, 2:33 IST
ಆರೋಪಿ ಮನೀಷ್
ಆರೋಪಿ ಮನೀಷ್   

ಮಡಿಕೇರಿ: ಮೊಬೈಲ್ ಫೋನ್ ಬಳಸದೇ, ಯಾವುದೇ ಸಾಕ್ಷ್ಯವನ್ನೂ ಉಳಿಸದೇ ಕಳ್ಳವು ಮಾಡುತ್ತಿದ್ದ ಕಳ್ಳರ ಪಾಲಿಗೆ, ಜಿಗಣೆ ಹೀರಿದ್ದ ಅವರ ರಕ್ತವೇ ಈಗ ಸಾಕ್ಷಿಯಾಗಲಿದೆ.

‘ಇಲ್ಲಿನ 8 ಪೊಲೀಸರ ಮನೆಯಲ್ಲಿ ಜೂನ್ 17ರ ರಾತ್ರಿ ₹ 1.5 ಲಕ್ಷದಷ್ಟು ಮೌಲ್ಯದ ವಸ್ತುಗಳು, ನಗದನ್ನು ಕಳವು ‌ಮಾಡಿದ ವೇಳೆ ಇಬ್ಬರು ಆರೋಪಿಗಳು, ತಮ್ಮನ್ನು ಕಚ್ಚಿದ್ದ ಜಿಗಣೆಯನ್ನು ಹೊಸಕಿ ಹಾಕಿದ್ದರು. ಅದು ಹೀರಿದ್ದ ಅವರ ರಕ್ತವೇ ಪ್ರಕರಣದಲ್ಲಿ ವೈಜ್ಞಾನಿಕ ಸಾಕ್ಷಿಯಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಾರ್ವಲ್ಲಿ ಗ್ರಾಮದ ಸುರೇಶ್ ಸೆಂಗಾರ್ (23) ಹಾಗೂ ಮಾಲ್‌ಪುರ ಗ್ರಾಮದ ಮನೀಶ್ ಭಗೇಲ್ (27) ಬಂಧಿತರು. ಇನ್ನೂ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆದಿದೆ.

ADVERTISEMENT

‘ಇಬ್ಬರ ಪತ್ತೆಗೆ ₹ 15 ಲಕ್ಷ ವೆಚ್ಚವಾಗಿದ್ದು, 700 ಕಿ.ಮೀ ವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದರು. ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ 50ಕ್ಕೂ ಅಧಿಕ ಪೊಲೀಸರು 30 ದಿನ ಶೋಧ ನಡೆಸಿದ್ದರು. ಆರೋಪಿಗಳು ಮತ್ತೆ ಕಳವು ಮಾಡಲು ಪಿರಿಯಾಪಟ್ಟಣಕ್ಕೆ ಬಂದಾಗ ಬಂಧಿಸಲಾಯಿತು’ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಗೋವಾದಲ್ಲಿ ಕಳವು ಮಾಡಿದ್ದ ಬೈಕ್‌ನಲ್ಲಿ ನೇರ ಮಡಿಕೇರಿಗೆ ಬಂದು ಕಳ್ಳತನ ನಡೆಸಿ, ಬಳಿಕ ಇಲ್ಲಿನ ಕೆರೆಯೊಂದರಲ್ಲಿ ಬೈಕ್‌ ಅನ್ನು ತಳ್ಳಿ ಮತ್ತೊಂದು ಕಡೆ ಬೈಕ್ ಕಳವು ಮಾಡಿ ಅದರಲ್ಲಿ ಭದ್ರಾವತಿ, ದಾಂಡೇಲಿಯಲ್ಲೂ ಕಳ್ಳತನ ನಡೆಸಿ ಪರಾರಿಯಾಗಿದ್ದರು ಎಂದರು.

ಪ್ರತಿ ಬಾರಿ ಕಳವು ಮಾಡಿದಾಗಲೂ ಮಧ್ಯಪ್ರದೇಶದ ತಾಂಡಾ ಎಂಬ ಗ್ರಾಮದ ದೇಗುಲವೊಂದಕ್ಕೆ ಆರೋಪಿಗಳು ಕುರಿ ಬಲಿ ಕೊಡುತ್ತಿದ್ದರು. ಅವರ ಗ್ರಾಮದಲ್ಲಿ ಕಳವು ಆರೋಪಿಗಳೇ ಹೆಚ್ಚಿದ್ದಾರೆ. ಅಲ್ಲಿಗೆ ತೆರಳಿದ್ದ ಪೊಲೀಸರು, ಭಿಕ್ಷುಕರೂ ಸೇರಿದಂತೆ ನಾನಾ ಬಗೆಯ ವೇಷ ತೊಟ್ಟು ಆರೋಪಿಗಳ ಜಾಡು ಹಿಡಿದಿದ್ದರು. ಅವರು ಕಳವಿಗೆ ಬರುವ ವಿಷಯ ಅರಿತು ವಾಪಸಾಗಿ ಇಲ್ಲಿಯೇ ಬಂಧಿಸಿದರು’ ಎಂದರು.

‘ಪೊಲೀಸರು‌‌‌ ಹಾಗೂ ಕಾನೂನಿನ ಬಗ್ಗೆ ಆರೋಪಿಗಳಿಗೆ ಭಯವಿಲ್ಲ. ಗುಜರಾತ್‌ನಲ್ಲಿ ತಮ್ಮನ್ನು ಹಿಡಿಯಲು ಬಂದವರ ಕಣ್ಣನ್ನು ಬರಿಗೈಯಲ್ಲೇ ಕಿತ್ತು ಹಾಕಿದ ಕ್ರೂರಿಗಳು ಇವರು. ಮಧ್ಯಪ್ರದೇಶದ ನಿವೃತ್ತ ನ್ಯಾಯಾಧೀಶರ ಮನೆಯಲ್ಲೂ ಕಳವು ಮಾಡಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.