
ಮಡಿಕೇರಿ: 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ. ಸೋಮಶೇಖರ್ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಚುನಾವಣಾ ಆಯೋಗ, ಜಿಲ್ಲಾಡಳಿತ ವತಿಯಿಂದ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಅವರಿಬ್ಬರೂ ಮಾತನಾಡಿದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ರಾಷ್ಟ್ರೀಯ ಮತದಾರರ ದಿನಕ್ಕೆ ಚಾಲನೆ ನೀಡಿ ಮಾತನಾಡಿ ‘ರಾಷ್ಟ್ರವು ಶೇ 65ಕ್ಕೂ ಹೆಚ್ಚು ಯುವ ಮತದಾರರನ್ನು ಹೊಂದಿದ್ದು, ಯುವ ಜನರು ತಪ್ಪದೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಯುವ ಜನರು ಐಪಿಎಲ್‌ಗೆ ಒತ್ತು ನೀಡುತ್ತಾರೆ, ಮತದಾನ ದಿನದಂದು ಪ್ರವಾಸ ತೆರಳುತ್ತಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವೇ ಎಂಬ ಬಗ್ಗೆ ಪ್ರತಿಯೊಬ್ಬರೂ ಅವಲೋಕಿಸಬೇಕು ಎಂದು ಕಿವಿಮಾತು ಹೇಳಿದರು.
ಮೊದಲು ಮತದಾನ ಮಾಡಿದ್ದಲ್ಲಿ, ಪ್ರಶ್ನೆ ಮಾಡುವ ಮನೋಭಾವ ಬರಲಿದೆ. ಅದನ್ನು ಬಿಟ್ಟು ರಜೆ ಸಿಕ್ಕಿದೆ ಎಂದು ಪ್ರವಾಸ ಹೊರಡುವುದು ಸರಿಯಲ್ಲ ಎಂದು ಜಿ.ಸುರೇಂದ್ರ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾತನಾಡಿ, ‘18 ವರ್ಷ ಪೂರ್ಣಗೊಂಡ ನಂತರ ಮೊದಲ ಬಾರಿಗೆ ಚುನಾವಣಾ ಗುರುತಿನ ಚೀಟಿ ಪಡೆದಾಗ ಒಂದು ರೀತಿ ರೋಮಾಂಚಕವಾಗಿತ್ತು’ ಎಂದು ಸ್ಮರಿಸಿದರು.
‘ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಬೇಕು. ಮತದಾನ ಮಾಡುವಾಗ ಎಚ್ಚರ ವಹಿಸಬೇಕು. ಯಾರ ಪ್ರಭಾವಕ್ಕೂ ಒಳಗಾಗದೆ ಮತದಾನ ಮಾಡುವುದು ಅರ್ಹರೆಲ್ಲರ ಜವಾಬ್ದಾರಿಯಾಗಿದೆ’ ಎಂದರು.
‘ಕುಗ್ರಾಮಗಳಲ್ಲಿಯೂ ಹೆಚ್ಚಿನ ಮತದಾನ ಆಗಬೇಕು. ಮತದಾನದಲ್ಲಿ ಖುಷಿಯಿಂದ ಭಾಗವಹಿಸಿ, ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಿನ ಶ್ರಮಿಸಬೇಕು’ ಎಂದು ಕರೆ ನೀಡಿದರು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದರು. 18 ವರ್ಷ ತುಂಬಿದ ಹೊಸ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ಇದೇ ಸಂದರ್ಭದಲ್ಲಿ ಗಣ್ಯರು ವಿತರಿಸಿದರು.
ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ಪ್ರೌಢಶಾಲಾ, ಪದವಿಪೂರ್ವ ಮತ್ತು ಪದವಿ ಹಂತದ ವಿದ್ಯಾರ್ಥಿಗಳಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಜತೆಗೆ ಕಿಟ್ ವಿತರಿಸಲಾಯಿತು.
ತಹಶಿಲ್ದಾರರಾದ ಆರ್.ಶ್ರೀಧರ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಶರ್ಮಿಳಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಶಿರಸ್ತೆದಾರರಾದ ಮಧುಕರ, ಮಹೇಶ್, ಚಂದ್ರಶೇಖರ್, ಅನಿಲ್ ಕುಮಾರ್, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ, ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿಂದು ಭಾಗವಹಿಸಿದ್ದರು.
ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು.
ತಪ್ಪದೇ ಮತದಾನ ಮಾಡಿ
ಜಿಲ್ಲಾಧಿಕಾರಿ ಯುವ ಮತದಾರರು ಚುನಾವಣಾ ಗುರುತಿನ ಚೀಟಿ ಪಡೆಯುವ ಮೂಲಕ ಚುನಾವಣೆ ಸಂದರ್ಭದಲ್ಲಿ ತಪ್ಪದೆ ಮತ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಹಬ್ಬ ಎಂದು ಕರೆಯುತ್ತೇವೆ. ಆ ದಿಸೆಯಲ್ಲಿ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಅರ್ಹರೆಲ್ಲರೂ ತಪ್ಪದೆ ಮತ ಹಕ್ಕು ಚಲಾಯಿಸಬೇಕು ಎಂದರು. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವ ಮತದಾರರು ಮತದಾನದಲ್ಲಿ ಮತ ಹಕ್ಕು ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಯದೆ ಪ್ರಜಾಪ್ರಭುತ್ವ ರಾಷ್ಟ್ರವನ್ನು ಬಲಪಡಿಸುವತ್ತ ಗಮನಹರಿಸಬೇಕು ಎಂದು ಹೇಳಿದರು. ಮತದಾನದ ಮಹತ್ವ ಕುರಿತು ಸ್ವೀಪ್ ಕಾರ್ಯಕ್ರಮ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತದೆ. ನಮೂನೆ 6 7 ಮತ್ತು 8 ರಂತೆ ಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ತೆಗೆದು ಹಾಕುವುದು ಅಥವಾ ಸ್ಥಳಾಂತರಕ್ಕೆ ಅವಕಾಶವಿದ್ದು ಇದನ್ನು ಅರ್ಹರು ಬಳಸಿಕೊಳ್ಳಬೇಕು ಎಂದರು.