ಮಡಿಕೇರಿಯ ಪತ್ರಿಕಾ ಭವನದಲ್ಲಿ ಗುರುವಾರ ಕೊಡಗು ಪತ್ರಕರ್ತರ ಸಂಘ ಮತ್ತು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ವತಿಯಿಂದ ನಡೆದ ಪತ್ರಿಕಾ ವಿತರಕರ ದಿನಾಚರಣೆಯನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವಕಾಮತ್ ಉದ್ಘಾಟಿಸಿದರು.
ಮಡಿಕೇರಿ: ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಹಾಗೂ ಪತ್ರಿಕಾ ವಿತರಕರ ಭವನ ನಿರ್ಮಾಣದ ಚಿಂತನೆಗಳು ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಚಿಗುರೊಡೆದವು.
ಕೊಡಗು ಪತ್ರಕರ್ತರ ಸಂಘ ಮತ್ತು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವಕಾಮತ್ ಅವರು, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ನಿಧಿಯನ್ನು ಸ್ಥಾಪಿಸಿದಲ್ಲಿ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ನಂತರ ಮಾತನಾಡಿದ ಪತ್ರಿಕೋದ್ಯಮಿ ಹಾಗೂ ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಅವರು, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿದಲ್ಲಿ ಅದಕ್ಕೆ ಮೂಲ ಧನವಾಗಿ ₹ 1 ಲಕ್ಷ ನೀಡುವುದಾಗಿ ಘೋಷಿಸಿದರು. ಮಾತ್ರವಲ್ಲ, ನಿಧಿಯ ಸ್ಥಾಪನೆಗೆ ಮುಂದಾಗಿ ಅಗತ್ಯ ರೂಪುರೇಷೆಗಳನ್ನು ಮಾಡುವಂತೆಯೂ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ‘ಕೊಡಗು ಪತ್ರಕರ್ತರ ಸಂಘದಿಂದ 2022ರಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿ ಆದಷ್ಟು ಶೀಘ್ರ ಚಾಲನೆ ನೀಡಬೇಕು’ ಎಂದು ತಿಳಿಸಿದರು.
ಮಾತನಾಡಿದ ಎಲ್ಲರೂ ಪತ್ರಿಕಾ ವಿತರಕರ ಕಾರ್ಯವನ್ನು ಶ್ಲಾಘಿಸಿದರು.
ಪತ್ರಿಕಾ ವಿತರಕ ಸುಂಟಿಕೊಪ್ಪದ ವಸಂತ ಮಾತನಾಡಿದರು. ಇದೇ ವೇಳೆ ಪತ್ರಿಕಾ ವಿತರಕರಿಗೆ ಕಿರುಕಾಣಿಕೆಯನ್ನಿತ್ತು ಗೌರವಿಸಲಾಯಿತು.
ಶಿಕ್ಷಣ ಇಲಾಖೆಯ ನಿವೃತ್ತ ನೌಕರ ಹಾಗೂ ಹಿರಿಯ ಓದುಗ ಪಿ.ಎ.ನಾಣಯ್ಯ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಸತೀಶ್, ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಸಂಘದ ಸದಸ್ಯ ಪಿ.ಎಂ.ರವಿ, ನಿರ್ದೇಶಕ ಅರುಣ್ ಕೂರ್ಗ್, ಹಿರಿಯ ಪತ್ರಿಕಾ ವಿತರಕ ಕೆ.ಎನ್.ಶಿವಪ್ರಸಾದ್ ಭಟ್ ಭಾಗವಹಿಸಿದ್ದರು.
ಪತ್ರಿಕಾ ವಿತರಕರ ಕಾರ್ಯಕ್ಕೆ ಶ್ಲಾಘನೆ ಪತ್ರಿಕಾ ವಿತರಕರಿಗೆ ಕಿರು ಕಾಣಿಕೆ ಹಲವು ಮಂದಿ ಕಾರ್ಯಕ್ರದಲ್ಲಿ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.