ಶನಿವಾರಸಂತೆ: ಇಲ್ಲಿನ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಹಾಗೂ ಪರಿವಾರ ದೇವರುಗಳ 5ನೇ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಪಟ್ಟಣದ ಎಲ್ಲ ದೇಗುಲಗಳಲ್ಲೂ ವಿಶೇಷ ಪ್ರಾರ್ಥನೆ ನಡೆಯಿತು. ಜತೆಗೆ, ಇಲ್ಲಿನ ಮಸೀದಿಯಲ್ಲೂ ಸರ್ವ ಧರ್ಮಿಯರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ಎಲ್ಲಾ ಜಾತಿ, ಧರ್ಮದವರು ಒಂದಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಎನಿಸಿತು.
ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೇ ಗಂಗಾ ಪೂಜೆ, ಗೋ ಪೂಜೆ ಮಂಗಳಾರತಿ ಕಾರ್ಯಕ್ರಮಗಳು ಆರಂಭವಾಗಿ ದೀಪಾರಾಧನೆ, ಗಣಪತಿ ಪೂಜೆ, ಪಂಚಗವ್ಯ, ನವಗ್ರಹ ಪೂಜೆ, ಧನ್ವಂತರಿ ಹೋಮ, ಮೂಲ ದೇವರಿಗೆ ಫಲಪಂಚಾಮೃತ ಅಭಿಷೇಕ, ಪೂಜೆಗಳು ನೆರವೇರಿದವು.
ನಂತರ, ಪಟ್ಟಣದ ವಿವಿಧ ದೇವಸ್ಥಾನಗಳಾದ ಪಾರ್ವತಿ, ಗಣಪತಿ, ಚಂದ್ರಮೌಳೇಶ್ವರ ದೇವಸ್ಥಾನ, ರಾಮ ಮಂದಿರ, ಚಂಗಡಹಳ್ಳಿ ರಸ್ತೆಯ ಬನ್ನಿಮಂಟಪ, ತ್ಯಾಗರಾಜ ಕಾಲೋನಿಯ ಚೌಡೇಶ್ವರಿ ದೇವಸ್ಥಾನ, ಶ್ರೀ ವಿಜಯ ವಿನಾಯಕ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನಡೆದವು.
ಮಧ್ಯ ಪೇಟೆಯ ಮುಖ್ಯರಸ್ತೆಯಲ್ಲಿ ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆ ಹೊರಟು ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಸ್ಥಾನದ ದೇವರಿಗೆ ಮಹಾಪೂಜೆ ವಿಧಿ ವಿಧಾನಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ತೀರ್ಥ ಪ್ರಸಾದ ವಿನಿಯೋಗ ಮತ್ತು ಅನ್ನದಾನ ಏರ್ಪಡಿಸಲಾಗಿತ್ತು.
ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ಗಣಪತಿ ಚಂದ್ರಮೌಳೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಮಹಾಂತೇಶ್ ಭಟ್ ಮತ್ತು ಸುಹಾಸ್ ಅವರ ನೇತೃತ್ವದಲ್ಲಿ, ಅಮೃತ ವಾದ್ಯಗೋಷ್ಠಿಯೊಂದಿಗೆ ವಿಜೃಂಭಣೆಯಿಂದ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.