ADVERTISEMENT

ಸೋಮಾವಾರಪೇಟೆ: ಸೌಲಭ್ಯ ವಂಚಿತ ಮಲ್ಲಳ್ಳಿ ಗ್ರಾಮ

ಸಂಕಷ್ಟದಿಂದ ಬೇಸತ್ತು ಗ್ರಾಮ ತೊರೆಯುತ್ತಿರುವ ಕುಟುಂಬಗಳು

ಡಿ.ಪಿ.ಲೋಕೇಶ್
Published 25 ಜುಲೈ 2024, 7:27 IST
Last Updated 25 ಜುಲೈ 2024, 7:27 IST
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹಾಳಾಗಿರುವುದು.
ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹಾಳಾಗಿರುವುದು.   

ಸೋಮಾವಾರಪೇಟೆ: ರಾಜ್ಯದ ಪ್ರಮುಖ ಜಲಪಾತಗಳಲ್ಲೊಂದಾದ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ಮಲ್ಲಳ್ಳಿ ಗ್ರಾಮ ಮೂಲ ಸೌಲಭ್ಯದಿಂದ ವಂಚಿತವಾಗಿದ್ದು, ಸ್ಥಳೀಯ ನಿವಾಸಿಗಳು ಗ್ರಾಮವನ್ನು ತೊರೆಯುತ್ತಿದ್ದಾರೆ.

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಜಲಪಾತ ವೀಕ್ಷಣೆಗೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಸಂಭ್ರಮಿಸುತ್ತಾರೆ. ಮಲ್ಲಳ್ಳಿ ಗ್ರಾಮಸ್ಥರು ಮಾತ್ರ ಸವಲತ್ತುಗಳಿಲ್ಲದೆ ಪರಿತಪಿಸುವಂತಾಗಿದೆ. ಕುಡಿಯುವ ನೀರಿಲ್ಲ. ವಿದ್ಯುತ್ ಒಮ್ಮೆ ಮಳೆಗಾಲದಲ್ಲಿ ಹೋದರೆ, ಬರುವುದು ತಿಂಗಳುಗಳ ನಂತರ. ಮನೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಸುಮಾರು 700 ಸೆ.ಮೀ ಮಳೆ ಬೀಳುವ ಪ್ರದೇಶವಾಗಿದ್ದು, ಮಳೆ ಪ್ರಾರಂಭವಾದೊಡನೆ ಇಲ್ಲಿನ ಜನರ ಸಮಸ್ಯೆ ದುಪ್ಪಟ್ಟಾಗುತ್ತದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಸೌಲಭ್ಯ ಒದಗಿಸಲು ಪ್ರತಿನಿಧಿಗಳು ಮುಂದಾಗಿಲ್ಲ. ಈ ಭಾಗದಲ್ಲಿ ವಾಸವಿದ್ದರೆ, ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಸಹ ಸಮಸ್ಯೆಯಾಗುತ್ತದೆ. ಸಮಸ್ಯೆಗಳಿಂದ ಬೇಸತ್ತ ಇಲ್ಲಿನ ಕೆಲ ಕುಟುಂಬಗಳು ಗ್ರಾಮ ತೊರೆದಿವೆ. ಉಳಿದ ಎಂಟು ಕುಟುಂಬಗಳು ಇನ್ನೂ ಸವಲತ್ತು ಸಿಗುವ ಭರವಸೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ADVERTISEMENT

ಈ ಜಲಪಾತಕ್ಕೆ ವರ್ಷವಿಡೀ ಪ್ರವಾಸಿಗರು ಬರುತ್ತಾರೆ. ಸ್ಥಳೀಯ ಪಂಚಾಯಿತಿಗೂ ಇದರಿಂದ ಅದಾಯ ಬರುತ್ತಿದೆ. ಆದರೆ, ಜಲಪಾತಕ್ಕೆ ಹೆಸರು ಬಂದಿರುವ ಮಲ್ಲಳ್ಳಿ ಎಂಬ ಕುಗ್ರಾಮ ಇವತ್ತಿಗೂ ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿದೆ. ಇಲ್ಲಿ ನೆಲೆನಿಂತಿದ್ದ ಅನೇಕ ಯುವಕ-ಯುವತಿಯರು ಉದ್ಯೋಗ ಅರಸಿ ನಗರ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಈ ಗ್ರಾಮದ ಜೊತೆ ಸಂಬಂಧ ಬೆಳೆಸಲು ಯಾವುದೇ ಊರಿನವರು ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಮಲ್ಲಳ್ಳಿ ಜಲಪಾತವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅದರೆ ಗ್ರಾಮಕ್ಕೆ ಕನಿಷ್ಠ ಕಚ್ಚಾ ರಸ್ತೆಯೂ ಇಲ್ಲ. ಮಳೆಗಾಲದಲ್ಲಿ ಈ ಗ್ರಾಮಕ್ಕೆ ವಾಹನಗಳ ಸಂಚಾರವಿಲ್ಲದೆ ಅಗತ್ಯ ವಸ್ತುಗಳನ್ನು ತಲೆ ಮೇಲೆ ಹೊತ್ತು ಒಂದೂವರೆ ಕಿ.ಮೀ. ದೂರ ನಡೆದುಕೊಂಡು ಬಂದು ಹೋಗಬೇಕಿದೆ. ಇಲ್ಲಿನವರು ಕಾಫಿ, ಏಲಕ್ಕಿ ಸೇರಿದಂತೆ ಹಲವು ಕೃಷಿ ಮಾಡುತ್ತಿದ್ದಾರೆ. ಅದರೆ ಮೂಲ ಭೂತ ಸೌಕರ್ಯವಿಲ್ಲದ ಕಾರಣ ಕೃಷಿ ಮಾಡಲಾಗದ ಪರಿಸ್ಥಿತಿ ನಿಮರ್ಾಣವಾಗಿದೆ.


ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರ್ಕಾರದಿಂದ ರೂ. 3.50 ಕೋಟಿ ಅನುದಾನದಲ್ಲಿ ಮಲ್ಲಳ್ಳಿ ಜಲಪಾತಕ್ಕೆ ಕಾಂಕ್ರೀಟ್ ರಸ್ತೆ, ರೇಲಿಂಗ್ ಸೇರಿದಂತೆ ಕೆಲವೊಂದು ಯೋಜನೆಗಳನ್ನು ಮಾಡಿ, ಅರ್ಧಕ್ಕೆ ನಿಲ್ಲಿಸಿದೆ. ಇದರೊಂದಿಗೆ ಮಲ್ಲಳ್ಳಿ ಗ್ರಾಮಕ್ಕೂ ಒಂದೂವರೆ ಕಿ.ಮೀ.ರಸ್ತೆಯನ್ನು ನಿರ್ಮಿಸಬಹುದಿತ್ತು ಎಂದು ಸ್ಥಳೀಯರಾದ ವೆಂಕಟೇಶ್ ತಿಳಿಸಿದರು.


ಮಲ್ಲಳ್ಳಿ ಗ್ರಾಮದಲ್ಲಿ ಒಟ್ಟು 20 ಕುಟುಂಬಗಳಿದ್ದವು. ಮೂಲಸೌಕರ್ಯಗಳ ಕೊರತೆಯಿಂದಾಗಿ ಆದರೆ ಇತ್ತೀಚೆಗೆ 12 ಕುಟುಂಬಗಳು ಗ್ರಾಮವನ್ನು ತೊರೆದು ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಇಚ್ಚಾಶಕ್ತಿಯ ಕೊರತೆಯಿಂದ ಇಂದಿಗೂ ಕುಗ್ರಾಮವಾಗಿಯೇ ಉಳಿದಿದೆ. ಮಲ್ಲಳ್ಳಿ ಜಲಪಾತಕ್ಕೆ ಮಂತ್ರಿಗಳು, ಹಿರಿಯ ಅಧಿಕಾರಿಗಳು ಹಲವಾರು ಭಾರಿ ಭೇಟಿ ನೀಡುತ್ತಾರೆ. ಆದರೆ, ಗ್ರಾಮದ ಕಡೆ ಜನಪ್ರತಿನಿಧಿಗಳು, ಮುಖಮಾಡುತ್ತಿಲ್ಲ.


ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಲ್ಲಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದಾಗ ಸ್ಥಳೀಯರು ಗ್ರಾಮಕ್ಕೆ ಸವಲತ್ತು ನೀಡಲು ಮನವಿ ಮಾಡಿದ್ದರು. ಮರು ದಿನವೇ ಇಂಜಿನೀಯರ್ ಅವರನ್ನು ಗ್ರಾಮಕ್ಕೆ ಕಳುಹಿಸಿ, ಅಂದಾಜು ಪಟ್ಟಿ ತಯಾರಿಸಿ, ರಸ್ತೆಗೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ಹಿನ್ನೆಲೆ ಯೋಜನೆಗೆ ಎಳ್ಳು ನೀರು ಬಿಡಲಾಯಿತು. ಅಂದಿನಿಂದ ಇಂದಿನವರೆಗೆ ಯಾವ ಅಧಿಕಾರಿಗಳು ಮಲ್ಲಳ್ಳಿ ಗ್ರಾಮದತ್ತ ಬಂದು ಇಲ್ಲಿನವರ ಸಮಸ್ಯೆ ಆಲಿಸಲಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಅಭಿಪ್ರಾಯ:

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ರಾತ್ರಿ ಹೊತ್ತಿನಲ್ಲಿ ಕತ್ತಲೆಯಲ್ಲೇ ಬದುಕು ಕಳೆಯಬೇಕಾಗಿದೆ. ರಸ್ತೆ ಸರಿ ಇಲ್ಲದ ಕಾರಣ ತುತರ್ು ಸಂದರ್ಭದಲ್ಲೂ ಗ್ರಾಮಕ್ಕೆ ಬಾಡಿಗೆ ವಾಹನಗಳವರು ಬರಲು ಹಿಂದೇಟು ಹಾಕುತ್ತಾರೆ. ಮೂಲಸೌಕರ್ಯಗಳಿಲ್ಲದ ಈ ಗ್ರಾಮದಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಮಕ್ಕಳು ಶಾಲೆಗಳಿಗೆ ತೆರಳಲು ಕಷ್ಟಕರವಾಗಿದೆ ಇದರಿಂದ ಸ್ಥಳೀಯ ನಿವಾಸಿಗಳು ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಕಂಡುಕೊಳ್ಳುತ್ತಿದ್ದಾರೆ.


- ಕಾವೇರಮ್ಮ, ಮಲ್ಲಳ್ಳಿ ಗ್ರಾಮದ ನಿವಾಸಿ.

ಆಸ್ತಿ ಹಕ್ಕುಪತ್ರ ನೀಡಲು ಒತ್ತಾಯ
ಆಸ್ತಿ ಹಕ್ಕು ಪತ್ರಗಳು ಇಲ್ಲದ ಕಾರಣ ಸರ್ಕಾರದ ಸೌಲಭ್ಯಗಳು ಇಲ್ಲಿನ ರೈತರಿಗೆ ಸಿಗುತ್ತಿಲ್ಲ. ಪರಿಸರ ಸೂಕ್ಷ್ಮವಲಯ ಸಿ ಮತ್ತು ಡಿ ಭೂಮಿ ನೆಪದಲ್ಲಿ ಕೃಷಿಕರಿಗೆ ಅನ್ಯಾಯ ಮಾಡಬಾರದು. ಆಸ್ತಿಯ ಹಕ್ಕು ಪತ್ರ ನೀಡದ ಕಾರಣ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಕಂದಾಯ ಇಲಾಖೆ ನಿಯಮಗಳನ್ನು ಸರಳೀಕರಣಗೊಳಿಸಿ ಆಸ್ತಿ ಹಕ್ಕುಪತ್ರಗಳನ್ನು ನೀಡಬೇಕು ಎನ್ನುತ್ತಾರೆ ಮಲ್ಲಳ್ಳಿ ಗ್ರಾಮದ ನಿವಾಸಿ ಗಣೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.