
ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ 55ನೇ ವರ್ಷದ ಮಂಡಲ ಪೂಜೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಶನಿವಾರ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಪ್ರಧಾನ ಅರ್ಚಕ ಗಣೇಶ್ ಉಪಾಧ್ಯಯ ಅವರ ನೇತೃತ್ವದಲ್ಲಿ ಪುರೋಹಿತರು ವಿವಿಧ ಪೂಜಾ ವಿಧಿವಿಧಾನಗಳನ್ನು ಕೈಗೊಂಡರು. ಬೆಳಿಗ್ಗೆ 6.45ಕ್ಕೆ ಗಣಪತಿ ಹೋಮದೊಂದಿಗೆ ವೈದಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ನಂತರ ಕನ್ನಿಮೂಲ ಗಣಪತಿಗೆ ಎಳನೀರು ಅಭಿಷೇಕ ನಡೆಯಿತು. ದೇವಾಲಯದ ಆವರಣದಲ್ಲಿ ಕೇರಳದ ಚಂಡೆಮೇಳ ಎಲ್ಲರ ಗಮನ ಸೆಳೆಯಿತು.
ಬೆಳಿಗ್ಗೆ 10ಕ್ಕೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಲಕ್ಷಾರ್ಚನೆ ನೆರವೇರಿತು. 12 ಗಂಟೆ ನಂತರ ಅಯ್ಯಪ್ಪ ವ್ರತಧಾರಿಗಳಿಂದ ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ದೂರ್ವಚನೆ, ಪಂಚಾಮೃತ ಅಭಿಷೇಕ ನಡೆದು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಉದ್ಘೋಷದೊಂದಿಗೆ ಸಮಾಪ್ತಿಗೊಳಿಸಿದರು.
ಮಧ್ಯಾಹ್ನ 1 ಗಂಟೆಗೆ ಅಯ್ಯಪ್ಪ ಸ್ವಾಮಿ, ಗಣಪತಿಗೆ ಮಹಾಪೂಜೆ, ಆರತಿ ಪೂಜೆ ನಡೆಯುತ್ತಿದ್ದಂತೆ ಚಂಡೆ ವಾದ್ಯ ಮತ್ತು ಪಟಾಕಿಯ ಸದ್ದು ಭಕ್ತರನ್ನು ಆಕರ್ಷಿಸಿತು. ತೀರ್ಥಪ್ರಸಾದದ ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ 1 ಗಂಟೆಯಿಂದ 5 ಗಂಟೆವರೆಗೆ ಅನ್ನಸಂತರ್ಪಣೆ ನಡೆಯಿತು.
ಕೊಡಗರಹಳ್ಳಿ, ಕಂಬಿಬಾಣೆ, ಮಾದಾಪುರ, ಹರದೂರು, ಕೆದಕಲ್, ಬಾಳೆಕಾಡು, ಮತ್ತಿಕಾಡು, ಏಳನೇ ಹೊಸಕೋಟೆ, ಕುಶಾಲನಗರ, ಗರಗಂದೂರು ಸೇರಿದಂತೆ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವತಾ ಕಾರ್ಯದಲ್ಲಿ ಭಾಗವಹಿಸಿದರು.
ದೇವಾಲಯ ಮತ್ತು ಪಟ್ಟಣವನ್ನು ವಿದ್ಯುತ್ ದೀಪ, ತಳಿರು ತೋರಣ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಗೌರವಾಧ್ಯಕ್ಷರಾದ ಬಾಲಕೃಷ್ಣ, ಮುತ್ತಯ್ಯ, ಸುರೇಶ್ ಗೋಪಿ, ಉಪಾಧ್ಯಕ್ಷರಾದ ಎಂ.ಮಂಜುನಾಥ್, ಬಿ.ಕೆ.ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಪದಾಧಿಕಾರಿಗಳಾದ ಕನಿಶ್, ವಿ.ಎ.ಸಂತೋಷ್, ಸಿ.ಸಿ.ಸುನಿಲ್, ದಿನು ದೇವಯ್ಯ, ಎ.ಶ್ರೀಧರ್ ಕುಮಾರ್, ಶ್ರೀಧರನ್, ಶಬರಿಮಲೆ ಆಡಳಿತ ಮಂಡಳಿಯ ಗೋಕುಲ್ ಸ್ವಾಮಿ ಸೇರಿದಂತೆ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.