ADVERTISEMENT

ಪುಸ್ತಕ ಸಂಸ್ಕೃತಿ ಬಿತ್ತಲು ‘ಮನೆಗೊಂದು ಗ್ರಂಥಾಲಯ’: ಡಾ.ಮಾನಸ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:52 IST
Last Updated 24 ಫೆಬ್ರುವರಿ 2026, 7:52 IST
‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಕರಪತ್ರವನ್ನು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಸೋಮವಾರ ಮಡಿಕೇರಿಯಲ್ಲಿ ಬಿಡುಗಡೆ ಮಾಡಿದರು.
‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಕರಪತ್ರವನ್ನು ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಸೋಮವಾರ ಮಡಿಕೇರಿಯಲ್ಲಿ ಬಿಡುಗಡೆ ಮಾಡಿದರು.   

ಮಡಿಕೇರಿ: ಮನೆಮನೆಗಳಲ್ಲಿ ಪುಸ್ತಕ ಸಂಸ್ಕೃತಿಯ ಬೀಜ ಬಿತ್ತಲು ‘ಮನೆಗೊಂದು ಗ್ರಂಥಾಲಯ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು, ಮುಂದೆ ಇದು ಫಲ ಕೊಡಲಿದೆ ಎಂಬ ವಿಶ್ವಾಸವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ ‘ಮನೆಗೊಂದು ಗ್ರಂಥಾಲಯ’ದ ಕರಪತ್ರ ಬಿಡುಗಡೆ ಮಾಡಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ಇಂದು ಆಧುನೀಕತೆಯ ನಾಗಾಲೋಟದಲ್ಲಿ ಸಿಲುಕಿರುವ ಯುವ ಸಮೂಹ ಪುಸ್ತಕ ಸಂಸ್ಕೃತಿಯಿಂದ ದೂರ ಇದ್ದಾರೆ. ಜನರನ್ನು ಪುಸ್ತಕದೊಂದಿಗೆ ಸಂಪರ್ಕಿಸುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ 30 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಾಗಿವೆ ಎಂದರು.

ADVERTISEMENT

ಪ್ರತಿ ಜಿಲ್ಲೆಯಲ್ಲೂ 10 ಮಂದಿ ಜಾಗೃತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಇವರು ಮನೆಮನೆಗಳಲ್ಲಿ ಗ್ರಂಥಾಲಯ ಶುರು ಮಾಡುವುದಕ್ಕೆ ಪ್ರೇರೇಪಣೆ ನೀಡಲಿದ್ದಾರೆ. ಆಗ ಪುಸ್ತಕ ಖರೀದಿ ಹೆಚ್ಚುತ್ತದೆ, ಪ್ರಕಾಶಕರಿಗೆ ಲಾಭವಾಗುತ್ತದೆ, ಲೇಖಕರ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತದೆ, ಮುದ್ರಣಾಲಯಗಳು, ಡಿಟಿಪಿ ಹೀಗೆ ಪುಸ್ತಕವನ್ನೇ ನಂಬಿದವರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಮನೆಮನೆಗಳಲ್ಲಿ ಪೂಜಾ ಕೋಣೆ ಇರುವಂತೆ ಗ್ರಂಥಾಲಯವಿರುವಂತೆ ಮಾಡಬೇಕು. ಆಗ ಪೂಜಾ ಪರಿಕರಗಳಿಗೆ ಬೇಡಿಕೆ ಇರುವಂತೆ ಪುಸ್ತಕಗಳಿಗೂ ಬೇಡಿಕೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಂಜನಗೂಡು ತಿರುಮಲಾಂಬ, ಹಾ.ಮಾ.ನಾಯಕ, ಪಿ.ಆರ್.ತಿಪ್ಪೇಸ್ವಾಮಿ ಹಾಗೂ ಗಳಗನಾಥರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಅವುಗಳನ್ನು ಮುಖ್ಯಮಂತ್ರಿಗಳಿಂದ ಪ್ರದಾನ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪ್ರಾಧಿಕಾರದ ವತಿಯಿಂದ  ‘ಅಂಗಳದಲ್ಲಿ ತಿಂಗಳ ಪುಸ್ತಕ’ ಎಂಬ ಮತ್ತೊಂದು ಯೋಜನೆಯನ್ನೂ ಆರಂಭಿಸಲಾಗಿದ್ದು, ಆ ಕಾರ್ಯಕ್ರಮವೂ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಅರ್ಹತಾ ಪತ್ರವನ್ನು ಬಿ.ಎನ್.ಪ್ರಕಾಶ್, ಸುಬ್ರಾಯ ಸಂಪಾಜೆ, ಎಚ್.ಎಲ್.ದಿವಾಕರ, ರಂಜಿತ್ ಕವಲಪಾರ, ಮುರಳಿಧರ, ಕೆ.ವಿ.ಉಮೇಶ್, ಕೆ.ಜಯಲಕ್ಷ್ಮಿ, ಕೇಶವ ಕಾಮತ್, ಟಿ.ಪಿ.ರಮೇಶ್, ಪ್ರತಿಮಾ ರೈ ಅವರಿಗೆ ವಿತರಿಸಲಾಯಿತು.

ಹಿಂದೆ ಚಂದಮಾಮ ಬಾಲಮಿತ್ರ ಓದುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವುದು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಬರಹಗಾರರ ಸಂಖ್ಯೆ ಹೆಚ್ಚಿದ್ದು ಪ್ರಕಟವಾಗುವ ಪುಸ್ತಕಗಳು ಮಾರಾಟವಾಗಬೇಕು
–ಟಿ.ಪಿ.ರಮೇಶ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ
‘ಕೊಡಗು ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ಇಲ್ಲ. ಪುಸ್ತಕ ಪ್ರಾಧಿಕಾರದವರು ಪುಸ್ತಕ ಮಳಿಗೆ ಸ್ಥಾಪನೆಗೆ ಮುಂದಾಗಬೇಕು. ಪುಸ್ತಕ ಮೇಳಗಳನ್ನು ಆಯೋಜಿಸಬೇಕು
–ಎಚ್.ಟಿ.ಅನಿಲ್ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ

ಮೊಬೈಲ್‌ ಬೆಂಕಿ ಇದ್ದಂತೆ...

‘ಮೊಬೈಲ್ ಎನ್ನುವುದು ಬೆಂಕಿ ಇದ್ದಂತೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು. ‘ಬೆಂಕಿಯ ಮೇಲೆ ಹಾಲಿನ ಪಾತ್ರೆ ಇಟ್ಟರೆ ಹಾಲು ಬಿಸಿಯಾಗುತ್ತದೆ. ಆದರೆ ಬೆಂಕಿಯ ಮೇಲೆ ನಮ್ಮ ಕೈಯನ್ನು ಇಟ್ಟರೆ ಕೈ ಸುಡುತ್ತದೆ. ಹಾಗಾಗಿ ಬೆಂಕಿಯನ್ನು ಹೇಗೆ ನಾವು ಒಳ್ಳೆಯದಕ್ಕೆ ಜವಾಬ್ದಾರಿಯಿಂದ ಬಳಕೆ ಮಾಡುತ್ತೇವೋ ಹಾಗೆಯೇ ಮೊಬೈಲ್‌ ಅನ್ನೂ ಬಳಕೆ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.