ADVERTISEMENT

ಮನೆಹಳ್ಳಿ ಮಠ: ದೀಪೋತ್ಸವ ಸಂಭ್ರಮ

ಗುರುಸಿದ್ಧವೀರೇಶ್ವರರ ಉತ್ಸವ ಆಚರಣೆ; ಸಹಸ್ರಾರು ಭಕ್ತಾದಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:11 IST
Last Updated 10 ಡಿಸೆಂಬರ್ 2025, 4:11 IST
ಸೋಮವಾರಪೇಟೆ ತಾಲ್ಲೂಕಿನ ಆಲೂರುಸಿದ್ಧಾಪುರ ಮನೆಹಳ್ಳಿ ಮಠದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರುಗಳು ಚಾಲನೆ ನೀಡಿದರು.  
ಸೋಮವಾರಪೇಟೆ ತಾಲ್ಲೂಕಿನ ಆಲೂರುಸಿದ್ಧಾಪುರ ಮನೆಹಳ್ಳಿ ಮಠದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರುಗಳು ಚಾಲನೆ ನೀಡಿದರು.     

ಸೋಮವಾರಪೇಟೆ: ತಾಲ್ಲೂಕಿನ ಆಲೂರುಸಿದ್ಧಾಪುರ ಸಮೀಪದ ಮನೆಹಳ್ಳಿ ಮಠದಲ್ಲಿ ಸೋಮವಾರ ಸಂಜೆ ಸಂಭ್ರಮದ ದೀಪೋತ್ಸವ ಮತ್ತು ಗುರುಸಿದ್ಧವೀರೇಶ್ವರರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಸಹಸ್ರಾರು ಭಕ್ತಾದಿಗಳು ಭಕ್ತಿ ಭಾವದಿಂದ ಪಾಲ್ಗೊಂಡರು.

ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಮಠವು ಈ ಹಿಂದೆ ಅಜ್ಞಾತ ಸ್ಥಳವಾಗಿತ್ತು. ಈಗ ವರ್ಷದಿಂದ ವರ್ಷಕ್ಕೆ ಧಾರ್ಮಿಕತೆಯ ಶ್ರದ್ಧಾಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಕಾಡಿನಿಂದ ಕೂಡಿದ್ದ ಈ ಪ್ರದೇಶದಲ್ಲಿ ಗುರು ಸಿದ್ಧವೀರೇಶ್ವರ ಸ್ವಾಮಿಗಳ ಶ್ರಮದಿಂದ ಪೂಜೆ, ದಾಸೋಹ ಕಾಯಕಗಳಿಂದ ತಪೋಕ್ಷೇತ್ರವಾಗಿ ಬೆಳೆದು ಬರುತ್ತಿದೆ’ ಎಂದರು.

ADVERTISEMENT

ಶಿಕ್ಣಣ ತಜ್ಞ ದಾವಣಗೆರೆಯ ಸಾಗರ್ ಮಾತನಾಡಿ, ‘ಎಲ್ಲ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದಲ್ಲಿ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಆದರೆ, ಕೆಲವರು ದುಶ್ಚಟಗಳಿಗೆ ಬಲಿಯಾಗಿ ಭವಿಷ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಗೇಮ್‌ಗಳಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ನೈತಿಕ ಶಿಕ್ಷಣದ ಅವಶ್ಯಕತೆಯಿದೆ. ಬಸವಣ್ಣ ಅವರ ಅನುಭವ ಮಂಟಪದ ರೀತಿಯ ಶಿಕ್ಷಣ ವ್ಯವಸ್ಥೆ ಬರಬೇಕು’ ಎಂದು ಹೇಳಿದರು.

ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಉದ್ಘಾಟಿಸಿದರು. ನಂತರ ಮಾತನಾಡಿ, ‘ಕೊಡಗು ಮಠಗಳ ನಾಡಾಗಿದೆ. ಉತ್ತರ ಕೊಡಗಿನಲ್ಲಿ ತಪೋವನ ಮನೆಹಳ್ಳಿ ಮಠವು ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಂದ ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ’ ಎಂದರು.

ವಕೀಲ ಚಂದ್ರಮೌಳಿ ಅವರು, ಕ್ಷೇತ್ರದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಮುಳ್ಳೂರು ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.