ADVERTISEMENT

ಜನ್ಮದಿನಾಚರಣೆ, ಮೆರವಣಿಗೆ ಬೇಕಿಲ್ಲ: ಕೆ.ಸಿ.ಕಾರ್ಯಪ್ಪ ಸಲಹೆ

ಸರ್ಕಾರದ ಅನುದಾನವನ್ನು ಜಿಲ್ಲೆಯ ಬಡವರ ಕಲ್ಯಾಣಕ್ಕೆ ಬಳಸಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 12:43 IST
Last Updated 28 ಜನವರಿ 2019, 12:43 IST
ಮಡಿಕೇರಿಯಲ್ಲಿ ಸೋಮವಾರ ನಡೆದ ‘ಫೀಲ್ಡ್‌ ಮಾರ್ಷಲ್‌’ ಕೆ.ಎಂ.ಕಾರ್ಯಪ್ಪ ಅವರ 120ನೇ ಜನ್ಮದಿನಾಚರಣೆಯನ್ನು ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ ಅವರು ಉದ್ಘಾಟಿಸಿದರು
ಮಡಿಕೇರಿಯಲ್ಲಿ ಸೋಮವಾರ ನಡೆದ ‘ಫೀಲ್ಡ್‌ ಮಾರ್ಷಲ್‌’ ಕೆ.ಎಂ.ಕಾರ್ಯಪ್ಪ ಅವರ 120ನೇ ಜನ್ಮದಿನಾಚರಣೆಯನ್ನು ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ ಅವರು ಉದ್ಘಾಟಿಸಿದರು   

ಮಡಿಕೇರಿ: ‘ಜನ್ಮದಿನಾಚರಣೆಗೆ ಬಳಸುವ ಹಣವನ್ನೇ ಬಡಜನರ ಕಲ್ಯಾಣಕ್ಕೆ ಬಳಸಬಹುದು’ ಎಂದು ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ ಸಲಹೆ ನೀಡಿದರು.

ನಗರದ ಹಳೇ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಡೆದ ‘ಫೀಲ್ಡ್ ಮಾರ್ಷಲ್‌’ ಕೆ.ಎಂ.ಕಾರ್ಯಪ್ಪ ಅವರ 120ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಮೆರವಣಿಗೆ, ಪ್ರತಿಮೆಗೆ ಮಾಲಾರ್ಪಣೆ ಎಂದೆಲ್ಲ ಸಾಕಷ್ಟು ಹಣ ವ್ಯಯಿಸಲಾಗುತ್ತಿದೆ. ಕಾರ್ಯಕ್ರಮದ ನಡೆದ ಬಳಿಕ ಊಟ ಚೆನ್ನಾಗಿತ್ತು ಎಂಬ ಮಾತಷ್ಟೇ ಉಳಿಯಲಿದೆ. ನಮ್ಮ ತಂದೆಯೂ (ಕೆ.ಎಂ.ಕಾರ್ಯಪ್ಪ) ಇದನ್ನೆಲ್ಲ ಇಷ್ಟ ಪಡುತ್ತಿರಲಿಲ್ಲ. ಆದ್ದರಿಂದ, ಅದೇ ಹಣವನ್ನೂ ಮುಂದಿನ ವರ್ಷದಿಂದ ಜಿಲ್ಲೆಯ ಜನರ ಕಲ್ಯಾಣಕ್ಕೆ ಬಳಸಿ’ ಎಂದು ಸಲಹೆ ನೀಡಿದರು.

ADVERTISEMENT

‘ಜನ್ಮದಿನಾಚರಣೆಗೆ ಸರ್ಕಾರ ನೀಡುವ ಅನುದಾನದ ವಿಚಾರದಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಪ್ರತಿಯೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡುತ್ತಾರೆ. ಇದ್ಯಾವುದೂ ಬೇಡ. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಈ ಹಣವನ್ನು ಬಡವರ ಶ್ರೇಯೋಭಿವೃದ್ಧಿಗೆ ಬಳಸಲು ಚಿಂತಿಸಬೇಕು’ ಎಂದು ಸಲಹೆ ನೀಡಿದರು.

‘ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ನೂರಾರು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಅವರಿಗೆ ಶೀಘ್ರವೇ ಪುನರ್ವಸತಿ ಕೆಲಸಗಳು ಆಗಬೇಕು’ ಎಂದು ಹೇಳಿದರು.

‘ನಮ್ಮ ತಂದೆ ದೇಶವೇ ಮೊದಲು; ಉಳಿದಿದ್ದು ನಂತರ ಎಂದು ನಂಬಿದ್ದರು. ಅದರಂತೆಯೇ ಬದುಕಿದ್ದರು’ ಎಂದು ನುಡಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಪ್ರತಿಕ್ರಿಯಿಸಿ, ‘ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರ ಸಾಧನೆಯ ಬಗ್ಗೆ ಇಂದಿನ ಯುವಕರಿಗೆ ತಿಳಿಸಬೇಕಿರುವ ಕಾರಣಕ್ಕೆ ಅವರ ಜನ್ಮ ದಿನಾಚರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಯಪ್ಪ ಅವರು ಮನಸ್ಸು ಮಾಡಿದ್ದರೆ ಪ್ಯಾರಿಸ್‌, ಲಂಡನ್‌ನಲ್ಲಿ ಕೊನೆಯ ದಿನಗಳನ್ನು ಕಳೆಯಬಹುದಿತ್ತು. ಆದರೆ, ಅವರು ತಾವು ಹುಟ್ಟೂರು ಮರೆಯದೇ ಮಡಿಕೇರಿಗೇ ಬಂದು ನೆಲೆಸಿದ್ದರು’ ಎಂದು ಹೇಳಿದರು.

‘ಫೀಲ್ಡ್‌ ಮಾರ್ಷಲ್‌’ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಫೋರಂ ಅಧ್ಯಕ್ಷರೂ ಆದ ನಿವೃತ್ತ ಕೆ.ಸಿ.ಸುಬ್ಬಯ್ಯ ಮಾತನಾಡಿ, ‘ಈ ಜನ್ಮ ದಿನಾಚರಣೆಯನ್ನು ಹಲವು ವರ್ಷದಿಂದ ಸರ್ಕಾರವೇ ನಡೆಸುತ್ತಿದೆ. ಆದರೆ, ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರೂ ಹಣ ತರಿಸಿಕೊಳ್ಳಲು ಅಧಿಕಾರಿಗಳು ಎಡವಿದ್ದಾರೆ. ಮುಂದಿನ ವರ್ಷದಿಂದ ಈ ರೀತಿ ಅಗದಿರಲಿ’ ಎಂದು ಹೇಳಿದರು.

ನಿವೃತ್ತ ಮೇಜರ್‌ ಬಿ.ಎ.ನಂಜಪ್ಪ ಮಾತನಾಡಿ, ‘ಕಾರ್ಯಪ್ಪ ಅವರ ದೇಶಪ್ರೇಮ, ಸಮಯ ಪ್ರಜ್ಞೆಯ ಗುಣವನ್ನು ನಾವು ರೂಢಿಸಿಕೊಳ್ಳಬೇಕು. ಭಾರತೀಯ ಸೇನೆಯ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಸುಭಾಷ್‌ ಚಂದ್ರ ಬೋಸ್‌, ಮಹಾತ್ಮ ಗಾಂಧಿ ಹಾಗೂ ಕೆ.ಎಂ.ಕಾರ್ಯಪ್ಪ ಅವರು ಭಾರತ ರತ್ನ ಗೌರವಕ್ಕಿಂತಲೂ ಹೆಚ್ಚು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲೋಕೇಶ್‌ ಸಾಗರ್‌ ಮಾತನಾಡಿ, ‘ರೈತರು ಹಾಗೂ ಸೈನಿಕರ ಸೇವೆಯನ್ನು ನಾವು ಎಂದೂ ಮರೆಯುವಂತಿಲ್ಲ ಎಂದು ಹೇಳಿದರು.

ಪ್ರಭಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಉಳಿಯಡ ಪೂವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್‌, ರಾಘವನ್‌, ಸೈನಿಕ ಶಾಲೆಯ ಉಪನ್ಯಾಸಕ ಮಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.