ADVERTISEMENT

ಸೋಮವಾರಪೇಟೆ: ಹೊರ ಜಿಲ್ಲೆಯಿಂದ ಬಂದ ಯಂತ್ರಗಳು

ಆಗಾಗ ಬೀಳುವ ತುಂತುರು ಮಳೆ; ಭತ್ತದ ಕಟಾವಿಗೆ ತರಾತುರಿ

ಲೋಕೇಶ್ ಡಿ.ಪಿ
Published 28 ಡಿಸೆಂಬರ್ 2022, 5:18 IST
Last Updated 28 ಡಿಸೆಂಬರ್ 2022, 5:18 IST
ಸೋಮವಾರಪೇಟೆ ತಾಲ್ಲೂಕಿನಹೆಗ್ಗುಳ ಗ್ರಾಮದ ಜಿ.ಎಸ್. ರಾಜು ಎಂಬ ರೈತರು ದೀಣೆಕೊಪ್ಪ-ಗೌಡಳ್ಳಿ ಗ್ರಾಮದ ತಮ್ಮ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ನಡೆಸಿದರು
ಸೋಮವಾರಪೇಟೆ ತಾಲ್ಲೂಕಿನಹೆಗ್ಗುಳ ಗ್ರಾಮದ ಜಿ.ಎಸ್. ರಾಜು ಎಂಬ ರೈತರು ದೀಣೆಕೊಪ್ಪ-ಗೌಡಳ್ಳಿ ಗ್ರಾಮದ ತಮ್ಮ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ನಡೆಸಿದರು   

ಸೋಮವಾರಪೇಟೆ: ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆಯಿಂದ ಕಟಾವಿಗೆ ಬಂದ ಭತ್ತ ನೀರು ಹಾಗೂ ಮಣ್ಣು ಪಾಲಾಗುವ ಭಯದಿಂದ ಬೆಳಗಾರರರು ಕಟಾವಿಗೆ ಯಂತ್ರದ ಮೊರೆ ಹೋಗಿದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಟಾವಿನ ಯಂತ್ರಗಳು ಬಂದಿವೆ.

ಈಗಾಗಲೇ ಕಳೆದ 10 ದಿನಗಳ ಹಿಂದೆ ಸುರಿದ ಮಳೆಯಿಂದ ಗದ್ದೆಯಲ್ಲಿ ಕಟಾವು ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿತ್ತು. ನಂತರವೂ ಮೋಡ ಕವಿದ ವಾತಾವರಣದಿಂದಾಗಿ ಭತ್ತ ಕಟಾವಿಗೆ ರೈತರು ಮುಂದಾಗಿರಲಿಲ್ಲ. ಇದರೊಂದಿಗೆ ಕಾರ್ಮಿಕರು ಕಾಫಿ ಕೊಯ್ಲು ಮಾಡುವ ಕೆಲಸಕ್ಕೆ ತೆರಳುತ್ತಿರುವುದು ಭತ್ತದ ಕಟಾವಿಗೆ ಸಮಸ್ಯೆಯಾಗಿತ್ತು. ಒಂದು ವಾರದ ನಂತರ ಮತ್ತೆ ಮಳೆ ಬೀಳಲು ಆರಂಭವಾಗುತ್ತಿರುವುದು ಇನ್ನೂ ಕಟಾವು ಮಾಡದ ಬೆಳೆ ನಷ್ಟವಾಗುವ ಭೀತಿ ರೈತರನ್ನು ಕಾಡುತ್ತಿದೆ. ಇದರಿಂದ ಅನಿವಾರ್ಯ ಎಂಬಂತೆ ಹೊರ ಜಿಲ್ಲೆಗಳಲ್ಲಿ ಕಟಾವಿಗೆ ಬಳಸುತ್ತಿದ್ದ ಯಂತ್ರಗಳನ್ನು ತಂದಿದ್ದಾರೆ.

ಹೊರ ಜಿಲ್ಲೆಯಿಂದ ಯಂತ್ರಗಳನ್ನು ತರಿಸಿಕೊಂಡು ಗಂಟೆಗೆ ₹ 3 ಸಾವಿರದಂತೆ ಒಂದು ಕಡೆಯಿಂದ ಕಟಾವು ನಡೆಸಲಾಗುತ್ತಿದೆ. ಯಂತ್ರದ ಮೂಲಕವೇ ಕಟಾವು ಮಾಡಿದ ಭತ್ತದ ಹುಲ್ಲನ್ನು ಕಟ್ಟುವ ವ್ಯವಸ್ಥೆಯೂ ಇದ್ದು, ಬೆಳೆಗಾರರಿಗೆ ವರದಾನವಾಗಿದೆ. ಆದರೆ, ಹುಲ್ಲಿನಿಂದ ಸರಿಯಾಗಿ ರೈತರಿಗೆ ಲಾಭವಾಗುತ್ತಿಲ್ಲ.

ADVERTISEMENT

‘ಭತ್ತ ಮತ್ತು ಕಾಫಿ ಕಟಾವು ಮಾಡುವ ಸಂದರ್ಭದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಕಳೆದ ಕೆಲವು ವರ್ಷಗಳಿಂದ ಬೆಳೆ ನಷ್ಟವಾಗುತ್ತಿದೆ. ಆದರೂ, ಹೆಚ್ಚಿನ ರೈತರು ಭತ್ತದ ಕೃಷಿಯಿಂದ ಹಿಂದೆ ಸರಿಯದೆ, ಕೃಷಿ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ’ ಎಂದು ರಮೇಶ್ ಹೇಳಿದರು.

ಮಂಗಳವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಆಗಾಗ ತುಂತುರು ಮಾಳೆಯಾಗುತ್ತಿದ್ದು, ಹೆಗ್ಗುಳ ಗ್ರಾಮದ ಜಿ.ಎಸ್.ರಾಜು ಎಂಬ ರೈತರು ದೀಣೆಕೊಪ್ಪ-ಗೌಡಳ್ಳಿ ಗ್ರಾಮದ ತಮ್ಮ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ನಡೆಸಿದರು.

ತಾಲ್ಲೂಕಿನಲ್ಲಿ ಒಟ್ಟು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಕೈಗೊಳ್ಳಲಾಗಿತ್ತು. ಅದರಲ್ಲಿ ಈಗಾಗಲೇ ಕೆಲವೆಡೆಗಳಲ್ಲಿ ಕಟಾವಿನ ಕೆಲಸ ಮುಗಿದಿದೆ. ಉಳಿದೆಡೆಗಳಲ್ಲಿ ಈಗ ಕಟಾವು ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.