ADVERTISEMENT

ಚಿಗುರೊಡೆದ ಹೊಸ ರಂಗಮಂದಿರ ನಿರ್ಮಾಣದ ಕನಸು

ಜಿಲ್ಲಾಧಿಕಾರಿ ಪ್ರಸ್ತಾಪಕ್ಕೆ ಮಡಿಕೇರಿ ನಗರಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:11 IST
Last Updated 23 ಅಕ್ಟೋಬರ್ 2024, 5:11 IST
ಮಡಿಕೇರಿ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು. ಪೌರಾಯುಕ್ತ ಎಚ್.ಆರ್.ರಮೇಶ್ ಭಾಗವಹಿಸಿದ್ದರು
ಮಡಿಕೇರಿ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಆಡಳಿತಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು. ಪೌರಾಯುಕ್ತ ಎಚ್.ಆರ್.ರಮೇಶ್ ಭಾಗವಹಿಸಿದ್ದರು   

ಮಡಿಕೇರಿ: ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರು ಮಂಗಳವಾರ ಕರೆದಿದ್ದ ಮಡಿಕೇರಿ ನಗರಸಭೆ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆಯಲ್ಲಿ ನೂತನ ರಂಗಮಂದಿರದ ಕನಸು ಚಿಗುರೊಡೆಯಿತು.

ಗಾಂಧಿ ಮೈದಾನದಲ್ಲಿರುವ ರಂಗಮಂದಿರವನ್ನು ಕೆಡವಿ ನೂತನವಾಗಿ ಬೃಹತ್ ರಂಗಮಂದಿರ ನಿರ್ಮಾಣ ಮಾಡುವ ತಮ್ಮ ಕನಸನ್ನು ಸಭೆಯಲ್ಲಿ ಅವರು ಬಿಚ್ಚಿಡುತ್ತಿದ್ದಂತೆ, ಸರ್ವ ಸದಸ್ಯರೂ ಪಕ್ಷಬೇಧ ಮರೆತು ಅನುಮೋದನೆ ನೀಡಿದರು. ಇಂತಹದ್ದೊಂದು ಅಪರೂಪದ ಕ್ಷಣಗಳಿಗೆ ಇಲ್ಲಿನ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮಡಿಕೇರಿ ನಗರಸಭೆಯ ಕೌನ್ಸಿಲ್ ವಿಶೇಷ ಸಾಮಾನ್ಯ ಸಭೆ ಸಾಕ್ಷಿಯಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಈ ವರ್ಷದ ದಸರೆ ಯಶಸ್ವಿಯಾಗಿ ಮುಗಿಯಿತು. ಮುಂದಿನ ವರ್ಷದ ದಸರೆಗೆ ಈಗಲೇ ಸಿದ್ಧತೆಯನ್ನು ಆರಂಭಿಸಬೇಕಿದೆ. ಅದಕ್ಕಾಗಿ ನೂತನ ಯೋಜನೆಯೊಂದನ್ನು ಸಭೆಯ ಮುಂದಿಡುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಪ್ರತಿ ವರ್ಷ ದಸರೆಯಲ್ಲಿ ಗಾಂಧಿ ಮೈದಾನಲ್ಲಿ ವೇದಿಕೆ ನಿರ್ಮಾಣ ಮಾಡುವುದಕ್ಕಾಗಿ ಲಕ್ಷಗಟ್ಟಲೆ ಹಣ ವ್ಯಯಿಸುವುದಕ್ಕೆ ಬದಲಾಗಿ ಶಾಶ್ವತವಾದ ಸುಸಜ್ಜಿತ ರಂಗಮಂದಿರವನ್ನು ನಿರ್ಮಾಣ ಮಾಡಬೇಕಿದೆ. ಇದರಲ್ಲಿ ಗ್ರೀನ್ ರೂಂ, ವೇದಿಕೆಯ ಎರಡೂ ಬದಿಗಳಲ್ಲಿ ಗ್ಯಾಲರಿ, ಪಾವತಿಸಿ ಬಳಸುವ ಶೌಚಾಲಯ ಮತ್ತು ವಾಹನ ನಿಲುಗಡೆ ಸ್ಥಳ, ವೈದ್ಯಕೀಯ ಸಹಾಯ ಕೇಂದ್ರ ನಿರ್ಮಾಣ ಕಾಮಗಾರಿಗಳನ್ನು ಎಂಟರ್‌ಪ್ರೈಸಸ್‌ ನಿಧಿಯಲ್ಲಿರುವ ₹ 7 ಕೋಟಿಯಲ್ಲಿ ₹ 2 ಕೋಟಿ ಬಳಕೆ ಮಾಡಿ ಕೈಗೊಳ್ಳಬಹುದು’ ಎಂದು ಯೋಜನೆಯನ್ನು ಪ್ರಸ್ತಾಪಿಸಿದರು.

‘ಈ ರಂಗಮಂದಿರವನ್ನು ದಸರೆ ಅಲ್ಲದೇ ಇತರೆ ಕಾರ್ಯಕ್ರಮಗಳಿಗೂ ಬಾಡಿಗೆಗೆ ಕೊಡಬಹುದು. ಇದರಿಂದ ನಗರಸಭೆಗೆ ಆದಾಯವೂ ಬರುತ್ತದೆ’ ಎಂದರು. ಈ ಯೋಜನೆಗೆ ಎಲ್ಲ ಸದಸ್ಯರೂ ಸಹಮತ ವ್ಯಕ್ತಪಡಿಸಿ ಅನುಮೋದಿಸಿದರು.

ಪ್ರತಿಧ್ವನಿಸಿದವು ಮತ್ತೆ ಹಳೆಯ ಸಮಸ್ಯೆಗಳು!

ನಗರಸಭೆಯಲ್ಲಿ ಮತ್ತೆ ಹಳೆಯ ಸಮಸ್ಯೆಗಳೇ ಪ್ರತಿಧ್ವನಿಸಿದವು. ರಸ್ತೆಗುಂಡಿ, ನಾಯಿ, ಮಂಗ, ಮುಳ್ಳುಹಂದಿಗಳ ಕಾಟ, ಪ್ಲಾಸ್ಟಿಕ್ ಬಾಟಲಿಗಳ ಹಾವಳಿ, ರಾಜಕಾಲುವೆ ಒತ್ತುವರಿ... ಹೀಗೆ ಹಿಂದೆ ಪ್ರಸ್ತಾಪವಾಗಿದ್ದ ಸಮಸ್ಯೆಗಳೇ ಮತ್ತೆ ಮತ್ತೆ ಪ್ರಸ್ತಾಪವಾದವು.

ಸ್ವತಃ ಜಿಲ್ಲಾಧಿಕಾರಿಯವರೇ ಆಸ್ಪತ್ರೆಯ ಬಳಿ ಜೆಸಿಬಿಗಳ ನಿಲುಗಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ಅಂಗಡಿಗಳಲ್ಲೂ ಕನ್ನಡ ನಾಮಫಲಕ ಹಾಕಲೇಬೇಕು. ಇಲ್ಲದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.

ಬಿಜೆಪಿ ಸದಸ್ಯ ಅಪ್ಪಣ್ಣ ಮಾತನಾಡಿ, ‘ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನದ ಬಳಿಯ ಕಾಮಗಾರಿ ನಿಂತಿದೆ. ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ವಿಜಯ ವಿನಾಯಕ ದೇಗುಲದ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಸದಸ್ಯ ಮನ್ಸೂರ್, ‘ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಿ’ ಎಂದು ಒತ್ತಾಯಿಸಿದರು.

‘ರಾಜಕಾಲುವೆ ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ. ಇಲ್ಲದಿದ್ದರೆ ಬೆಂಗಳೂರಿನ ತರಹ ಆಗಬಹುದು’ ಎಂದು ಎಸ್‌ಡಿಪಿಐ ಸದಸ್ಯ ಬಷೀರ್ ಎಚ್ಚರಿಕೆ ನೀಡಿದರು.

ಬಿಜೆಪಿ ಸದಸ್ಯೆ ಸವಿತಾ ರಾಕೇಶ್‌, ‘ಮಹದೇವಪೇಟೆಯ ಮುಖ್ಯರಸ್ತೆಯನ್ನು ಮರು ಡಾಂಬರೀಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ಫ್ಲೆಕ್ಸ್’ಗಳಿಂದ ದಸರೆ ನೋಡಲಾಗಲಿಲ್ಲ. ಈಗಲೂ ಅವುಗಳನ್ನು ತೆಗದಿಲ್ಲ’ ಎಂದು ಸದಸ್ಯೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.

ಅಮಿನ್ ಮೊಹಿಸಿನ್ ಅವರು ಫಾರಂ ನಂಬರ್ 3 ಸಮಸ್ಯೆ ಕುರಿತು ಪ್ರಸ್ತಾಪಿಸಿದಾಗ, ‘ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೇ ಸರ್ಕಾರದ ಮಟ್ಟದಲ್ಲೇ ಇದಕ್ಕೊಂದು ಪರಿಹಾರ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೌರಾಯುಕ್ತ ಎಚ್.ಆರ್.ರಮೇಶ್ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಮಂಗಳವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬಿಜೆಪಿ ಸದಸ್ಯ ಉಮೇಶ್‌ ಸುಬ್ರಮಣಿ ಅವರ ಮಾತಿಗೆ ಪ್ರತಿಕ್ರಿಯಿಸಿದರು
ಮಡಿಕೇರಿಯಲ್ಲಿ ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಮಾತನಾಡಿದರು
‘ಪ್ರಜಾವಾಣಿ’ ಪ‍್ರಕಟಿಸಿದ್ದ ‘ದಸರಾ ನಗರಿ ಸಾಲದು ತಯಾರಿ’ ಎಂಬ ಸರಣಿಯಲ್ಲಿ ಸೆ. 29ರಂದು ‘ದಸರಾ: ಶಾಶ್ವತ ಕಾಮಗಾರಿಗಳ ಕೊರತೆ’ ಎಂಬ ಶೀರ್ಷಿಕೆಯಡಿ ಪ್ರತಿ ವರ್ಷವೂ ವೇದಿಕೆ ನಿರ್ಮಾಣಕ್ಕೆ ₹ 35 ಲಕ್ಷ ವೆಚ್ಚ ಮಾಡಲಾಗುತ್ತಿದ್ದು ಶಾಶ್ವತವಾದ ವೇದಿಕೆ ಇಲ್ಲವೇ ರಂಗಮಂದಿರ ಬೇಕು ಎಂದು ಗಮನ ಸೆಳೆದಿತ್ತು.
ಯಾರು ಏನೆಂದರು? ಇದೊಂದು ಒಳ್ಳೆಯ ಯೋಜನೆ. ನಾವು ಸ್ಥಳ ಪರಿಶೀಲನೆ ನಡೆಸಿ ರಂಗಮಂದಿರ ನಿರ್ಮಾಣ ಸಂಬಂಧ ಸಲಹೆಗಳನ್ನು ನೀಡುತ್ತೇವೆ. ಕೆ.ಎಸ್.ರಮೇಶ್ ಬಿಜೆಪಿ ಸದಸ್ಯ. *** ಒಳ್ಳೆಯ ದಸರೆ ಮಾಡಿದ್ದೀರಿ. ಇದೊಂದು ದೂರದೃಷ್ಟಿಯಾದ ಕೆಲಸ. ಈ ಕೆಲಸ ಬೇಗ ಆಗಲಿ ಉಮೇಶ್‌ ಸುಬ್ರಮಣಿ ಬಿಜೆಪಿ ಸದಸ್ಯ *** ನೂತನ ರಂಗಮಂದಿರ ನಿರ್ಮಾಣ ಸಂಬಂಧ ನಮಗೆ ಪಿಪಿಟಿ ಪ್ರೆಸೆಂಟೇಷನ್‌ ಬೇಕು ಅಮಿನ್‌ ಮೊಹಿಸಿನ್ ಎಸ್‌ಡಿಪಿಐ ಸದಸ್ಯ. *** ರಂಗಮಂದಿರ ನಿರ್ಮಾಣ ನಿಜಕ್ಕೂ ಒಳ್ಳೆಯ ಚಿಂತನೆ. ಆದರೆ ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿರಬೇಕು ಅರುಣ್ ಶೆಟ್ಟಿ ಬಿಜೆಪಿ ಸದಸ್ಯ *** ಇದು ಒಳ್ಳೆಯ ಕೆಲಸ. ಮುಂದಿನ ದಸರೆ ಒಳಗೆ ಮುಗಿಸಿ ದಸರಾ ಕಾರ್ಯಕ್ರಮಗಳು ಅಲ್ಲಿಯೇ ನೆರವೇರುವಂತೆ ಮಾಡಿ ಮಹೇಶ್ ಜೈನಿ ಬಿಜೆಪಿ ಸದಸ್ಯ. *** ಸ್ಥಳೀಯ ಕಲಾವಿದರಿಗೆ ಸುಲಭ ದರದಲ್ಲಿ ಕೊಡಿ. ಪಕ್ಕದಲ್ಲೆ ಸರ್ಕಾರಿ ಜಾಗ ಇದೆ. ಅಲ್ಲಿ ವಾಹನ ನಿಲುಗಡೆ ಮಾಡಬಹುದು.
ಅನಿತಾ ಪೂವಯ್ಯ ಬಿಜೆಪಿ ಸದಸ್ಯೆ

Cut-off box - 2 ಲೀಟರ್‌ಗಿಂತ ಕಡಿಮೆ ಪ್ಲಾಸ್ಟಿಕ್ ಬಾಟಲಿ ಮಾರಾಟ ನಿಷೇಧ ಮಡಿಕೇರಿ ನಗರದಲ್ಲಿ 2 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ನಿಷೇಧಿಸುವ ತೀರ್ಮಾನವನ್ನು ಸಭೆ ಕೈಗೊಂಡಿತು. ಈ ಸಂಬಂಧ ದಂಡ ವಿಧಿಸುವ ಕುರಿತು ಅತಿ ಶೀಘ್ರದಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಹಾಗೂ ಇತರರು ಈ ವಿಷಯ ಪ್ರಸ್ತಾಪಿಸಿದರು.

ಬೀದಿನಾಯಿ ಕಾಟದಿಂದ ಪಾರಾಗಲು ಕೊಡೆ ಹಿಡಿವ ಜಿಲ್ಲಾಧಿಕಾರಿ!

ನಗರದಲ್ಲಿ ಬೀದಿನಾಯಿಗಳು ನೀಡುತ್ತಿರುವ ಉಪಟಳವನ್ನು ಸದಸ್ಯರು ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ‘ಬೀದಿನಾಯಿಗಳ ಕಾಟದಿಂದ ತ‍ಪ್ಪಿಸಿಕೊಳ್ಳಲು ನಾನೇ ಸ್ವತಃ ರಸ್ತೆಯಲ್ಲಿ ನಡೆಯುವಾಗ ಕೊಡೆ ಹಿಡಿದು ಹೋಗುತ್ತೇನೆ’ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದರು. ಅಮಿನ್ ಮೊಹಿಸಿನ್ ಅವರು ಎಲ್ಲ ನಾಯಿಗಳನ್ನು ಹಿಡಿದು ‘ನಾಯಿ ಉದ್ಯಾನ’ ಮಾಡಿ ಎಂದರೆ ಕೆ.ಎಸ್.ರಮೇಶ್ ಅವರು ‘ಶೆಡ್ ನಿರ್ಮಿಸಿ ನಾಯಿಗಳನ್ನೆಲ್ಲ ಅದರಲ್ಲಿ ಬಿಡಿ’ ಎಂದರು. ಆದರೆ ಇವೆಲ್ಲವನ್ನೂ ಮಾಡಲಾಗದು ಎಂದ ಜಿಲ್ಲಾಧಿಕಾರಿ ‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಾಶ್ವತ ವೇದಿಕೆ ನಿರ್ಮಾಣ ಕುರಿತು ಗಮನ ಸೆಳೆದಿದ್ದ ‘ಪ್ರಜಾವಾಣಿ’

‘ದಸರಾ ನಗರಿ ಸಾಲದು ತಯಾರಿ’ ಎಂಬ ಸರಣಿಯನ್ನು ಕಳೆದ ತಿಂಗಳು ಆರಂಭಿಸಿದ್ದ ‘ಪ್ರಜಾವಾಣಿ’ ದಸರೆಗೆ ಸಂಬಂಧಿಸಿದಂತೆ ಶಾಶ್ವತ ಕಾಮಗಾರಿಗಳ ಕೊರತೆಯನ್ನು ಪ್ರಧಾನವಾಗಿ ಪ್ರಸ್ತಾಪಿಸಿತ್ತು. ಸೆ. 29ರಂದು ಈ ಸರಣಿಯಲ್ಲಿ ‘ದಸರಾ: ಶಾಶ್ವತ ಕಾಮಗಾರಿಗಳ ಕೊರತೆ’ ಎಂಬ ಶೀರ್ಷಿಕೆಯಡಿ ಪ್ರತಿ ವರ್ಷವೂ ವೇದಿಕೆ ನಿರ್ಮಾಣಕ್ಕೆ ₹ 35 ಲಕ್ಷ ವೆಚ್ಚ ಮಾಡಲಾಗುತ್ತಿದ್ದು ಶಾಶ್ವತವಾದ ವೇದಿಕೆ ಇಲ್ಲವೇ ರಂಗಮಂದಿರ ಬೇಕು ಎಂದು ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.