
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಎಲ್ಲ ದಲಿತ ಸಂಘಟನೆಗಳೂ ಒಂದಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆಯ ದಿನ ಎಲ್ಲ ಸಂಘಟನೆಗಳೂ ಒಂದಾಗಿ ಬೃಹತ್ ಸಮಾವೇಶ ಏರ್ಪಡಿಸಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಕೃಷ್ಣಪ್ಪ ಸ್ಥಾಪಿತ ಸಂಘಟನೆ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇನ್ನೂ ಸಹ ದಲಿತರು ಪೌಷ್ಠಿಕಾಂಶದ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸಮಾನತೆ ಇನ್ನೂ ದೊರೆತಿಲ್ಲ. ಜಾತಿಪದ್ಧತಿ ಅಭಿವೃದ್ಧಿಯ ಮೇಲೆ ಸವಾರಿ ಮಾಡುತ್ತಿದೆ. ಈ ಹಂತದಲ್ಲಿ ದಲಿತ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
‘ದಲಿತರೆಲ್ಲರೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಹೋರಾಟ ನಡೆಸಬೇಕು’ ಎಂದು ಕರೆಕೊಟ್ಟ ಅವರು, ಎಲ್ಲರೂ ಒಂದಾಗಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಯಕೆಯಾಗಿತ್ತು ಎಂಬುದನ್ನು ಯಾರೂ ಮರೆಯಬಾರದು’ ಎಂದರು.
‘ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ನೀಡಿದ ಸಮಸ್ಯೆಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಿ, ಅವುಗಳನ್ನು ಶೀಘ್ರ ಬಗೆಹರಿಸುವಂತೆ ಸೂಚನೆ ನೀಡಿರುವೆ’ ಎಂದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ್ ಪೊನ್ನಪ್ಪ ಮಾತನಾಡಿ, ‘35 ವರ್ಷಗಳಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಘಟನೆ ವತಿಯಿಂದ ಸನ್ಮಾನ ಮಾಡಲಾಗುತ್ತಿದೆ. ಅವರಲ್ಲಿ ಇಬ್ಬರು ಕೆಎಎಸ್ ಪಾಸಾಗಿದ್ದಾರೆ. ವೈದ್ಯರು ಸೇರಿದಂತೆ ಉನ್ನತ ಹುದ್ದೆಗಳಿಗೆ ಏರಿದ್ದಾರೆ. ನಗರಸಭೆಗೆ ಒಳಪಡುವ ಶಾಲೆಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.
ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕರ್ನಾಟಕ ದಲಿತ ರತ್ನ, ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್‌ಗೌಡ ಅವರಿಗೆ ಕೊಡಗು ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೇಘಾ ದೀಪಕ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಪರಿವರ್ತನಾ ಕಲಾ ತಂಡದವರು ಹಾಡುಗಳನ್ನು ಹಾಡಿದರು.
ಮುಡಾ ಅಧ್ಯಕ್ಷ ಬಿ.ವೈ.ರಾಜೇಶ್, ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎಲ್.ದಿವಾಕರ್, ಅಹಿಂದ ನಾಯಕ ಟಿ.ಪಿ.ರಮೇಶ್, ಮುಖಂಡರಾದ ಎಚ್.ವಿ.ದೇವದಾಸ್, ರಮೇಶ್ ಹೆಜ್ಜೂರು, ಇಸ್ಮಾಯಿಲ್, ಜಯಪ್ಪ ಹಾನಗಲ್, ಜಯೇಂದ್ರ, ಡಾ.ಸೌಮ್ಯ, ಎಂ.ಸೋಮಶೇಖರ್, ಶರೀನ್, ಮೋಹನ್ ಮೌರ್ಯ, ಸಂತೋಷ್ ಕುಮಾರ್, ಹಿರಿಯ ವಕೀಲ ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಭಾಗವಹಿಸಿದ್ದರು.
ಇದಕ್ಕೂ ಮುನ್ನ ವೀರಗಾಸೆ ಕುಣಿತ, ಪೂರ್ವಿಕರ ಸ್ತಬ್ಧಚಿತ್ರ ಹಾಗೂ ಬುದ್ಧ, ಅಂಬೇಡ್ಕರ್ ಅವರ ರಥದೊಂದಿಗೆ ಅಶೋಕಪುರದಿಂದ ಗಾಂಧಿ ಮೈದಾನದವರೆಗೂ ನಡೆಯಿತು.
ಒಳಮೀಸಲಾತಿ; ಯಾರಿಗೂ ಅನ್ಯಾಯವಾಗದಂತೆ ಕ್ರಮ
‘ಒಳಮೀಸಲಾತಿಯಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಇನ್ನೂ ನಿಯಮಗಳು ರೂಪಿತವಾಗಿಲ್ಲ. ಹೀಗಿರುವಾಗ ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇದರ ವಿರುದ್ಧ ದಲಿತರು ಒಗ್ಗಟ್ಟಾಗಿ ಇದ್ದಾಗ ಮಾತ್ರ ಧ್ವನಿ ಎತ್ತಲು ಸಾಧ್ಯ’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಯಾರಿಗೂ ಅನ್ಯಾಯವಾಗದಂತೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ವಿರೋಧ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರವನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.