ವಿರಾಜಪೇಟೆ: ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆ ಮೊಟ್ಟೆಯ ಬಳಿ ಕಾಂಕ್ರೀಟ್ ರಸ್ತೆ ಕುಸಿದು ವಾಹನ ಸಂಚಾರ ನಿರ್ಬಂಧಿಸಿರುವ ಸ್ಥಳಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯು ಭಾರಿ ಮಳೆಯಿಂದಾಗಿ ದುರಸ್ತಿಗೊಂಡಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ರಸ್ತೆಯ ಬದಿಯ ಕಾಫಿ ತೋಟದ ಮಾಲೀಕರೊಂದಿಗೆ ಮಾತನಾಡಿ, ನಂತರ ತೋಟದ ಅಂಚನ್ನು ಬಳಸಿಕೊಂಡು ರಸ್ತೆ ಸರಿಪಡಿಸಲಾಗುವುದು ಎಂದರು.
ಬಿರುಕುಬಿಟ್ಟಿದ್ದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ ಕಾರಣ ಗ್ರಾಮಸ್ಥರಿಗೆ ಸಮಸ್ಯೆಯಾಗಿತ್ತು. ಇದರಿಂದ ಜುಲೈ 24ರಂದು ಕೆದಮುಳ್ಳೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬದಲಿ ರಸ್ತೆ ಒದಗಿಸಲು ಒತ್ತಾಯಿಸಿದ್ದರು. ಬಳಿಕ ತಹಶೀಲ್ದಾರ್ ರಾಮಚಂದ್ರ ಅವರು ಸ್ಥಳಕ್ಕೆ ತೆರಳಿ ಬದಲಿ ರಸ್ತೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದ್ದರು.
ಬಳಿಕ ತಹಶೀಲ್ದಾರ್ ರಾಮಚಂದ್ರ ಅವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ವಿಪತ್ತು ನಿರ್ವಹಣಾ ನಿಧಿಯಿಂದ ಬದಲಿ ರಸ್ತೆಗೆ ₹ 5 ಲಕ್ಷ ಬಿಡುಗಡೆಗೊಳಿಸಿದ್ದರು. ಇದರಿಂದಾಗಿ ಗ್ರಾಮದ ನೆಲ್ಲಿಗೆ ಮೊಟ್ಟೆಯಿಂದ ತೆರ್ಮೆಮೊಟ್ಟೆಗೆ ತೆರಳುವ ಬದಲಿ ರಸ್ತೆ ಕಾಮಗಾರಿಗಳು ಆರಂಭಗೊಂಡಿದೆ.
ತಹಶೀಲ್ದಾರ್ ರಾಮಚಂದ್ರ, ಕಂದಾಯ ಇಲಾಖೆಯ ಪರಿವೀಕ್ಷಕ ಎಂ.ಎಲ್ ಹರೀಶ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಲಿಂಗರಾಜು, ಸೆಸ್ಕ್ ಎಂಜಿನಿಯರ್ ಸುರೇಶ್, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ರಂಜಿ ಪೂಣಚ್ಚ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜೆಫ್ರಿ ಉತ್ತಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.