ADVERTISEMENT

ನಾಪೋಕ್ಲು: ಗ್ರಾಮಕ್ಕೆ ಬರಲಿದೆ ಮೊಬೈಲ್ ಮೆಡಿಕಲ್ ಘಟಕ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:35 IST
Last Updated 15 ಮೇ 2025, 12:35 IST
  ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಕಚೇರಿ ಆವರಣದಲ್ಲಿ ಈಚೆಗೆ ಮೊಬೈಲ್ ಮೆಡಿಕಲ್ ಯೂನಿಟ್ ಅನ್ನು ಉದ್ಘಾಟಿಸಲಾಯಿತು
  ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಕಚೇರಿ ಆವರಣದಲ್ಲಿ ಈಚೆಗೆ ಮೊಬೈಲ್ ಮೆಡಿಕಲ್ ಯೂನಿಟ್ ಅನ್ನು ಉದ್ಘಾಟಿಸಲಾಯಿತು   

ನಾಪೋಕ್ಲು: ಆರೋಗ್ಯದ ಸಮಸ್ಯೆ ಇರುವ ಜಿಲ್ಲೆಯ ಕಾಫಿತೋಟದ ಕಾರ್ಮಿಕರು ಇನ್ನು ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳಬೇಕಿಲ್ಲ. ತಪಾಸಣೆಗಾಗಿ ಗಂಟೆಗಟ್ಟಲೆ ಕಾಯಬೇಕಿಲ್ಲ. ವೈದ್ಯರೇ ನಿಮ್ಮಬಳಿಗೆ ಬರುತ್ತಾರೆ. ತಪಾಸಣೆಗಾಗಿ ಮೊಬೈಲ್ ಮೆಡಿಕಲ್ ಘಟಕವೇ ನೀವಿರುವಲ್ಲಿಗೆ ಬರುತ್ತದೆ.

ಇಂತಹ ಒಂದು ವಿನೂತನ ಯೋಜನೆಗೆ ಈಚೆಗೆ ವಿರಾಜಪೇಟೆಯಲ್ಲಿ ಚಾಲನೆ ನೀಡಲಾಯಿತು. ವಿರಾಜಪೇಟೆಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಕಚೇರಿ ಆವರಣದಲ್ಲಿ ಈಚೆಗೆ ಶಾಸಕರು ಮೊಬೈಲ್ ಮೆಡಿಕಲ್ ಯೂನಿಟ್ ಅನ್ನು ಉದ್ಘಾಟಿಸಿದರು. ಬಳಿಕ ಘಟಕದ ವಾಹನವನ್ನು ಚಾಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕರು ಘಟಕದ ಸದುಪಯೋಗವನ್ನು ಪಡಿಸಿಕೊಳ್ಳಲು ತಿಳಿಸಿದರು.

ಬೆಂಗಳೂರು ಮೂಲದ ಟ್ರಾನ್ಸ್ ಫಾರ್ಮಿಂಗ್ ಟುಮಾರೊ ಫೌಂಡೇಶನ್ (ಟಿಟಿಎಫ್) ಸಂಸ್ಥಾಪಕ ಆನಂದ ರಾವ್ ಆಸ್ಟೆರ್ ವಾಲೆಂಟಿಯರ್ಸ್ ಹಾಗೂ 09 ಸಲೂಷನ್ಸ್ ಅವರ ಸಹಯೋಗದಲ್ಲಿ ಮೊಬೈಲ್ ಮೆಡಿಕಲ್ ಯೂನಿಟನ್ನು ಜಿಲ್ಲೆಗೆ ಕಲ್ಪಿಸಿ ಕೊಟ್ಟಿದ್ದಾರೆ. ಈ ಮೊಬೈಲ್ ಮೆಡಿಕಲ್ ಘಟಕವು ಕೊಡಗಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಲಿದ್ದು ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸುತ್ತದೆ ಎಂದು ಕೊಡಗಿನ ಪ್ರಾಜೆಕ್ಟ್ ಮೆನೇಜರ್ ಬಿ.ಹೆಚ್.ಸಂಪ್ರೀತ್ ಮಾಹಿತಿ ನೀಡಿದರು.

ADVERTISEMENT

ಅಧಿಕ ರಕ್ತದೊತ್ತಡ, ಮಧುಮೇಹ, ಬಿಎಂಐ, ತೂಕ, ಇಸಿಜಿ ಮುಂತಾದ ಪರೀಕ್ಷೆಗಳನ್ನು ನಡೆಸಲಿದ್ದು  ವೈದ್ಯ, ನರ್ಸ್, ಹಾಗೂ ಚಾಲಕರು ಇರಲಿದ್ದಾರೆ. ಒಂದು ದಿನಕ್ಕೆ ಒಂದು ಗ್ರಾಮದಂತೆ ನಿರಂತರ ಹತ್ತು ವರ್ಷಗಳ ಅವಧಿಗೆ ಈ ಘಟಕ ಕಾರ್ಯ ನಿರ್ವಹಿಸಲಿದೆ. ಇದು ಕೊಡಗಿನ ಕಾಫಿ ತೋಟದ ಕಾರ್ಮಿಕರು, ಹಾಗೂ ಹಾಗೂ ಬಡವರ ಆರೋಗ್ಯವನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಲಿದೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ಪುರಸಭೆಯ ಸದಸ್ಯ ರಾಫಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕೆಪಿಸಿಸಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಅಜ್ಜಿ ಕುಟ್ಟಿರ ನಿರಾನ್ ಕಾರ್ಯಪ್ಪ, ನಿವೃತ ಶಿಕ್ಷಕ ಮಂಜುನಾಥ್, ಪಕ್ಷದ ಕಾರ್ಯಕರ್ತರು, ಟಿಟಿಎಫ್ ಪ್ರಮುಖರು ಉಪಸ್ಥಿತರಿದ್ದರು.

ಮೊಬೈಲ್ ಮೆಡಿಕಲ್ ಯೂನಿಟ್ ಘಟಕ ವಾಹನವನ್ನು ಶಾಸಕ ಎ. ಎಸ್. ಪೊನ್ನಣ್ಣ ಚಾಲನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.