ADVERTISEMENT

ಮಡಿಕೇರಿ: ಬಾಳೆಯಿಂದ ಬೆಳಗಿತು ಶಾಲೆ

ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಳೆ ತೋಟ; ವಿದ್ಯಾರ್ಥಿಗಳಿಗೆ ಭೂರಿ ಭೋಜನ

ಗಿರೀಶ ಕೆ.ಎಸ್
Published 18 ನವೆಂಬರ್ 2023, 7:23 IST
Last Updated 18 ನವೆಂಬರ್ 2023, 7:23 IST
ಪೊನ್ನಂಪೇಟೆ ತಾ‌ಲ್ಲೂಕಿನ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಳೆತೋಟವನ್ನು ನಿರ್ವಹಣೆ ಮಾಡುತ್ತಿರುವ ಶಿಕ್ಷಕಿಯರು ಹಾಗೂ ಮಕ್ಕಳು
ಪೊನ್ನಂಪೇಟೆ ತಾ‌ಲ್ಲೂಕಿನ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಳೆತೋಟವನ್ನು ನಿರ್ವಹಣೆ ಮಾಡುತ್ತಿರುವ ಶಿಕ್ಷಕಿಯರು ಹಾಗೂ ಮಕ್ಕಳು   

ಮಡಿಕೇರಿ: ಶಾಲೆಯೊಳಗೊಂದು ಬಾಳೆ ತೋಟ, ಮಕ್ಕಳಿಗೆ ಬಾಳೆಹಣ್ಣಿನ ಭೂರಿ ಭೋಜನ, ಕೆ.ಜಿ.ಗೆ ₹100 ದಾಟಿದರೂ ಶಾಲೆಯ ಬಾಳೆಹಣ್ಣಿನ ತೋಟದ ಕಡೆಗೆ ನೋಡದ ಪ್ರಾಮಾಣಿಕ ಹಳ್ಳಿಯ ಜನ...

ಹೀಗೆ, ಪೊನ್ನಂಪೇಟೆ ತಾ‌ಲ್ಲೂಕಿನ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುರಿತು ಹೇಳುತ್ತಾ ಹೋದರೆ ಸಕಾರಾತ್ಮಕವಾದ ಒಂದೊಂದು ಸಂಗತಿಯೂ ಸುರುಳಿಯಂತೆ ತೆರೆದುಕೊಳ್ಳುತ್ತಾ ಹೋಗುತ್ತದೆ. ನಿಜಕ್ಕೂ ಅಚ್ಚರಿಗೆ ಕಾರಣವಾಗುತ್ತದೆ.

ಈ ಎಲ್ಲ ಅಚ್ಚರಿಯನ್ನು ತಿಳಿಯಲು ಈಗ ಶಾಲೆಗೆ ಭೇಟಿ ನೀಡುವುದು ಪ್ರಶಸ್ತವಾದ ಸಮಯ. ಏಕೆಂದರೆ, ಶಾಲೆಯಲ್ಲಿ ಮುಕ್ಕಾಲು ಎಕರೆ ಜಾಗದಲ್ಲಿ ಹಾಕಿದ ಬಾಳೆತೋಟ ಸಮೃದ್ಧ ಫಸಲು ನೀಡುತ್ತಿದೆ. ಏಲಕ್ಕಿ ಬಾಳೆಗೊನೆಯನ್ನು ಕತ್ತರಿಸಿ ಶಾಲೆಯ ಕೊಠಡಿಯಲ್ಲಿ ಹಣ್ಣು ಮಾಡಲಾಗುತ್ತಿದೆ. ಶಾಲೆಯಲ್ಲಿರುವ 60 ವಿದ್ಯಾರ್ಥಿಗಳು ಇವುಗಳನ್ನು ನಿತ್ಯವೂ ಸವಿಯುತ್ತಿದ್ದಾರೆ.

ADVERTISEMENT

ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹100 ದಾಟಿದರೂ ಇಲ್ಲಿನ ಜನರು ಈ ಬಾಳೆತೋಟದತ್ತ ತಿರುಗಿಯೂ ನೋಡಿಲ್ಲ. ‘ಬೆಳೆದ ಬಾಳೆ ಎಲ್ಲಾ ಶಾಲೆಗಿರಲಿ’ ಎಂಬ ಭಾವನೆಯಿಂದ ಇರುವ ಅವರು, ತೋಟಕ್ಕಾಗಿ ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಕೋವಿಡ್–19ರ ಕಾಲದಲ್ಲಿ ಈ ಬಾಳೆತೋಟವನ್ನು ಶಾಲೆಯ ಶಿಕ್ಷಕಿಯರೇ ಗ್ರಾಮಸ್ಥರ ಸಹಕಾರದಿಂದ ಬೆಳೆಸಿದರು. ಕೋವಿಡ್‌ ಇದ್ದಾಗ ವಿದ್ಯಾಗಮ ತರಗತಿ ಮಧ್ಯಾಹ್ನದವರೆಗೆ ಮಾತ್ರವೇ ಇತ್ತು. ಆದರೆ, ಶಿಕ್ಷಕರು ಸಂಜೆಯವರೆಗೂ ಶಾಲೆಯಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಮಧ್ಯಾಹ್ನದ ನಂತರ ಮಾಡುವುದಾದರೂ ಏನು ಎಂಬ ಪ್ರಶ್ನೆಗೆ ಇಲ್ಲಿನ ಶಿಕ್ಷಕಿಯರು ಶಾಲೆಯ ಆವರಣದಲ್ಲಿ ಬಾಳೆಗಿಡಗಳನ್ನು ನೆಟ್ಟರು.

ಈಗ ಇಲ್ಲಿ 60ರಿಂದ 70 ಬಾಳೆ ಗಿಡಗಳು ಇವೆ. ತೋಟದ ಕೆಲಸವನ್ನು ಅಡುಗೆ ಸಿಬ್ಬಂದಿಯ ಸಹಕಾರದೊಂದಿಗೆ ಮಕ್ಕಳೇ ನಿರ್ವಹಿಸುತ್ತಾರೆ. ಬಾಳೆಹಣ್ಣನ್ನು ಅವರೇ ಸವಿಯುತ್ತಾರೆ. ಇವೆಲ್ಲವೂ ಮಕ್ಕಳ ಪೌಷ್ಟಿಕಾಂಶ ವೃದ್ಧಿಗೂ ಸಹಕಾರಿಯಾಗಿವೆ.

ಇಲ್ಲಿ ಹಾಕಿರುವ ಕರಿಬಾಳೆಯನ್ನು ಸಾಂಬರಿಗೆ ಬಳಸಲಾಗುತ್ತಿದೆ. ಬಾಳೆಯೊಂದಿಗೆ ಅಡಿಕೆ ಹಾಗೂ ಸಪೋಟ ಗಿಡಗಳನ್ನು ನೆಟ್ಟು, ಇಡೀ ಶಾಲೆಯ ಆವರಣವೇ ಹಸಿರಿನಿಂದ ಕೂಡಿರುವಂತೆ ಮಾಡಲಾಗಿದೆ.

ಶಾಲೆಯಲ್ಲಿ ಬೆಳೆದ ಬಾಳೆಗೊನೆಯನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಬರುತ್ತಿರುವುದು

ಇಲ್ಲಿ ಮುಖ್ಯಶಿಕ್ಷಕಿ ಸುಜಾತಾ, ಸಹಶಿಕ್ಷಕಿಯರು ಅನಿತಾಕುಮಾರಿ, ಸಫೂರಾ, ಅತಿಥಿ ಶಿಕ್ಷಕಿ ರಸೀನಾ ಇದ್ದು, ಇಬ್ಬರು ಮಹಿಳಾ ಅಡುಗೆ ಸಿಬ್ಬಂದಿ ಇದ್ದಾರೆ. ಶಾಲೆಯಲ್ಲಿ ಇರುವವರೆಲ್ಲ ಶಿಕ್ಷಕಿಯರು ಹಾಗೂ ಮಹಿಳೆಯರು ಎಂಬುದು ವಿಶೇಷ.

ಪೊನ್ನಂಪೇಟೆ ತಾಲ್ಲೂಕಿನ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ‘ಮಕ್ಕಳಿಗೆ ಅಕ್ಷರ ಕಲಿಸುವುದರ ಜತೆಗೆ ಬದುಕಿನ ಶಿಕ್ಷಣವನ್ನೂ ನೀಡಲಾಗುತ್ತಿದೆ. ಶಿಕ್ಷಕರು, ಮಕ್ಕಳು ಹಾಗೂ ಸ್ಥಳೀಯರ ಇಚ್ಛಾಶಕ್ತಿಯಿಂದ ಇದು ಸಾಕಾರವಾಗಿದೆ. ಇದೊಂದು ಮಾದರಿ ಕ್ರಮ, ಇತರರಿಗೆ ಪ್ರೇರಣಾದಾಯಕ’ ಎಂದು ತಿಳಿಸಿದರು.

ಶಾಲೆಯ ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿರುವ ಬಾಳೆಗೊನೆಯಿಂದ ಬಾಳೆಹಣ್ಣುಗಳನ್ನು ಮಕ್ಕಳಿಗೆ ಹಂಚುತ್ತಿರುವುದು
ಅನೇಕ ಸಕಾರಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನೂ ಶಿಕ್ಷಕಿಯರು ಮಾಡುತ್ತಿದ್ದಾರೆ. ಇಲಾಖೆಯ ಅನುದಾನದ ಜತೆಗೆ ತಮ್ಮ ಹಣವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಾದರಿ ಅತ್ಯುತ್ತಮ ಶಾಲೆ.
ಎಂ.ಪ್ರಕಾಶ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ
5 ಕಿ.ಮೀ ದೂರದಿಂದ ದಣಿದು ಬರುವ ಮಕ್ಕಳು!
‘ಕಾಡೊಳಗೆ ಇರುವ ಅತ್ತಿಮಾನಿ ಮತ್ತು ಕೂಪು ಎಂಬ ಜನವಸತಿ ಪ್ರದೇಶದಿಂದ ಮಕ್ಕಳು ಸುಮಾರು 5 ಕಿ.ಮೀ ದೂರದಿಂದ ನಡೆದುಕೊಂಡೇ ಶಾಲೆಗೆ ಬರುತ್ತಾರೆ. ದಣಿದು ಬರುವ ಮಕ್ಕಳಿಗೆ ಶಾಲೆಯಲ್ಲಿ ಬೆಳೆದ ಬಾಳೆಹಣ್ಣುಗಳನ್ನು ನೀಡಿ ಅವರಿಗೆ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುತ್ತಿದ್ದೇವೆ. ನಾವೇನೂ ದೊಡ್ಡ ಕೆಲಸ ಮಾಡುತ್ತಿದ್ದೇವೆ ಎಂದು ಅನ್ನಿಸುತ್ತಿಲ್ಲ. ನಮ್ಮ ಕರ್ತವ್ಯವನ್ನಷ್ಟೇ ನಾವು ಮಾಡುತ್ತಿದ್ದೇವೆ’ ಎಂದು ಪ್ರಭಾರ ಮುಖ್ಯಶಿಕ್ಷಕಿ ಇ.ಎಸ್.ಸುಜಾತಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.