ADVERTISEMENT

ಸಾಮರಸ್ಯದ ಮೊಹರಂ ಆಚರಣೆ

ಕೊರೊನಾ ಕಾರಣದಿಂದ ಸಂಕ್ಷಿಪ್ತ ಮೆರವಣಿಗೆ, ದರ್ಗಾಗಳಲ್ಲಿ ಸಂಪ್ರದಾಯ ಪೂರೈಸಿದ ಧರ್ಮಗುರುಗಳು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 3:44 IST
Last Updated 20 ಆಗಸ್ಟ್ 2021, 3:44 IST
ಕಲಬುರ್ಗಿ ನಗರದ ಎಂಎಸ್‌ಕೆ ಮಿಲ್‌ ಬಳಿಯ ಹುಸೇನಿ ಚೌಕ್‌ನಲ್ಲಿ ಮೊಹರಂ ಆಚರಣೆಯ ಅಂಗವಾಗಿ ಗುರುವಾರ ಬೆಳಿಗ್ಗೆ ಹುಸೈನಿ ಬಾದ್ ಶಾ ಅಲಿ ಅಬ್ಬಾಸ್ ದೇವರ ಪಂಜಾ ಮೆರವಣಿಗೆ ನಡೆಯಿತು
ಕಲಬುರ್ಗಿ ನಗರದ ಎಂಎಸ್‌ಕೆ ಮಿಲ್‌ ಬಳಿಯ ಹುಸೇನಿ ಚೌಕ್‌ನಲ್ಲಿ ಮೊಹರಂ ಆಚರಣೆಯ ಅಂಗವಾಗಿ ಗುರುವಾರ ಬೆಳಿಗ್ಗೆ ಹುಸೈನಿ ಬಾದ್ ಶಾ ಅಲಿ ಅಬ್ಬಾಸ್ ದೇವರ ಪಂಜಾ ಮೆರವಣಿಗೆ ನಡೆಯಿತು   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಮೊಹರಂ ಹಬ್ಬದ ಸಂಭ್ರಮ ಕಂಡುಬಂತು. ಪ್ರವಾದಿ ಮೊಹಮದ್‌ ಅವರ ಮೊಮ್ಮಕ್ಕಳಾದ ಹಸನ್‌ ಹಾಗೂ ಹುಸೇನ್‌ ಅವರ ಬಲಿದಾನದ ಪ್ರತೀಕವಾಗಿ ಆಚರಿಸಲಾಗುವ ಈ ಉತ್ಸವದಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಪಾಲ್ಗೊಂಡರು. ಕೊರೊನಾ ಕಾರಣದಿಂದ ಈ ಬಾರಿ ಮೆರವಣಿಗೆ ನಿಷೇಧಿಸಿದ್ದು, ಅಲ್ಲಲ್ಲಿ ಕೆಲವು ಜನ ಸೇರಿಕೊಂಡು ಸಾಂಪ್ರದಾಯಿಕ ಆಚರಣೆ ನಡೆಸಿದರು.

ನಗರದಎಂಎಸ್‌ಕೆ ಮಿಲ್‌, ಬ್ರಹ್ಮಪೂರ, ಹುಸೇನಿ ಚೌಕ್‌, ಖೂನಿ ಹವಾಲಾ, ಮೋಮಿನ್‌ಪುರ, ಸೋನಿಯಾ ಗಾಂಧಿ ನಗರ ಮುಂತಾದ ಕಡೆಗಳಲ್ಲಿ ಇರುವ ದರ್ಗಾಗಳಲ್ಲಿ ಕಳೆದೊಂದು ವಾರದಿಂದ ಹಬ್ಬದ ಸಾಂಪ್ರದಾಯಿಕ ಆಚರಣೆಗಳು ನಡೆದವು. ಐತಿಹಾಸಿಕ ಖಾಜಾ ಬಂದಾ ನಾವಾಜ್‌ ದರ್ಗಾದಲ್ಲಿ ಕೂಡ ಖಾಜಾ ಬಂದಾ ನಾವಾಜ್‌ ಅವರ ವಂಶಸ್ಥರು ಸೇರಿಕೊಂಡು ಧರ್ಮಕಾರ್ಯಗಳನ್ನು ಆಚರಿಸಿದರು. ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗುವ ಕಾರಣ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಗುರುವಾರ ಬೆಳಿಗ್ಗೆಯಿಂದಲೇ ದರ್ಗಾಗಳಲ್ಲಿ ಅಲಾಯಿ, ಪಂಜಾ, ಡೋಲಿಗಳನ್ನು ಎಬ್ಬಿಸುವ ಆಚರಣೆಗಳು ನಡೆದವು. ಮುಸ್ಲಿಂ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ದರ್ಗಾಗಳ ಮುಖಂಡರು ಸೇರಿಕೊಂಡು ಸೀಮಿತ ಪ್ರದೇಶದಲ್ಲಿ ಮೆರವಣಿಗೆ ಮಾಡಿದರು. ಯುವಕರು ಪಂಜಾಗಳ ಮುಂದೆ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮತ್ತೆ ಕೆಲವು ಕಡೆ ಶೋಕಾಚರಣೆ ಅಂಗವಾಗಿ ದೇಹ ದಂಡಿಸಿಕೊಳ್ಳುವ ಸಂಪ್ರದಾಯವೂ ನಡೆಯಿತು.

ADVERTISEMENT

ಹಲವು ಮಹಿಳೆಯರು ದೇವರನ್ನು ಪ್ರತಿಷ್ಠಾಪಿಸಿದ ಸ್ಥಳಗಳಿಗೆ ಹೋಗಿ ಎಡೆ ನೀಡಿದರು. ಹಿಂದೂಗಳು ಕೂಡ ಕಾಯಿ, ಕರ್ಪೂರ, ಊದು, ಎಣ್ಣೆದೀಪ ಹಾಗೂ ಮಾದಲಿ ಎಡೆ ಅರ್ಪಿಸಿದರು. ಉತ್ಸವದ ನೇತೃತ್ವ ವಹಿಸಿದ್ದ ಮುಖಂಡರು ನವಿಲುಗರಿಯನ್ನು ತಲೆ ಮೇಲೆ ನೇವರಿಸುವ ಮೂಲಕ ಆಶೀರ್ವಾದ ಮಾಡಿದರು.

ಮಾರುಕಟ್ಟೆಯಲ್ಲೂ ಜನಜಂಗುಳಿ: ವರಮಹಾಲಕ್ಷ್ಮಿ ಹಾಗೂ ಮೊಹರಂ ಏಕಕಾಲಕ್ಕೆ ಬಂದ ಕಾರಣ ನಗರದ ಮಾರುಕಟ್ಟೆಗಳಲ್ಲೂ ಅಪಾರ ಜನಜಂಗುಳಿ ಕಂಡುಬಂತು.ಕಣ್ಣಿ, ಮಾರ್ಕೆಟ್‌, ಸೂಪರ್‌ ಮಾರ್ಕೆಟ್‌, ಶಹಾಬಜಾರ್‌, ಮುಸ್ಲಿಂಚೌಕ್‌, ರಾಮಮಂದಿರ ಸರ್ಕಲ್‌, ವಾಜಪೇಯಿ ಬಡಾವಣೆ ಸೇರಿದಂತೆ ಎಲ್ಲ ಕಡೆಯೂ ಬೆಳಿಗ್ಗೆಯಿಂದ ಖರೀದಿ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.