ನಾಪೋಕ್ಲು: ಸಮೀಪದ ಮೂರ್ನಾಡು ಪಟ್ಟಣದಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಮೂರ್ನಾಡಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಅಲಂಕೃತ ವೇದಿಕೆಯಲ್ಲಿ 32ನೇ ವರ್ಷದ ಆಯುಧ ಪೂಜೆ ಸಮಾರಂಭ ಜರುಗಿತು. ಆರಂಭದಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯನ್ನು ನೆರವೇರಿಸಲಾಯಿತು.
ನಂತರ ಮುಖ್ಯರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ಏಳುಮಲೆ ಮುದ್ದು ಮಾದಪ್ಪ, ಬಡವರ ಗುಡಿಸಲು ಮನೆ, ಕೊಡಗಿನ ಕಾವೇರಿ ಮಾತೆ, ಪರಿಶುದ್ಧ ಗಾಳಿಗೆ ಅಗ್ರಸ್ಥಾನ ಪಡೆದ ಮಡಿಕೇರಿ, ಶಬರಿಮಲೆ ಅಯ್ಯಪ್ಪ, ಈಸಲ ಕಪ್ ನಮ್ದೆ, ಚಿನ್ನಸ್ವಾಮಿ ಕ್ರೀಡಾಂಗಣ, ವಿಷ್ಣುವಿನ ವರಾಹರೂಪಂ, ಜಸ್ಟೀಸ್ ಫಾರ್ ಸೌಜನ್ಯ, ದೇವಿ ಮಹಾತ್ಮೆ, ಪಿಲಿ ನಲಿಕೆ, ಭೂಲೋಕಕ್ಕೆ ಭೂದೇವಿಯ ಆಗಮನ ಸೇರಿದಂತೆ ಹಲವು ಸ್ತಬ್ಧ ಚಿತ್ರಗಳು, ಕಲಾಕೃತಿಗಳು ಮತ್ತು ಕ್ಯಾಲಿಕಟ್‌ನ ಶ್ರೀಹರಿ ಕಲಾ ಸಮಿತಿಯ ಗೊಂಬೆ ಕುಣಿತ ಮತ್ತು ಸುಳ್ಯದ ವಾದ್ಯಗೋಷ್ಠಿಗಳು ವೀಕ್ಷಕರ ಗಮನ ಸೆಳೆದವು.
ಮೂರ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಸ್.ಎಂ. ದೇಚಮ್ಮ ಮಾತನಾಡಿ, ಭಾರತ ಸನಾತನ ಸಂಸ್ಕೃತಿಯ ಅದ್ದೂರಿಯ ಹಬ್ಬ ದಸರಾ. ಹಿಂದು ಸಂಸ್ಕೃತಿಯಲ್ಲಿ ಎರಡು ನವರಾತ್ರಿಗಳು ಬರುತ್ತವೆ. ಒಂದು ಶರವನ್ನಾವರಾತ್ರಿ ಮತ್ತು ವಸಂತ ನವರಾತ್ರಿ. ಆದರೆ ಶರವನ್ನಾವರಾತ್ರಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ವಿಜಯದಶಮಿಯ 9ನೇ ದಿನದ ಆಯುಧಪೂಜೆಯ ಮಹತ್ವ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ತಮ್ಮಜೀವನಕ್ಕೆ ಆಧಾರವಾದ ಪರಿಕರಗಳನ್ನು ಪೂಜಿಸಿ ಅದಕ್ಕೆ ಗೌರವವನ್ನು ನೀಡುವ ಮೂಲಕ ಎಲ್ಲರೂ ಆಯುಧ ಪೂಜೆಯನ್ನು ನೆರವೇರಿಸುವುದು ಗಮನಾರ್ಹವಾಗಿದೆ ಎಂದರು.
ಸಂಘದ ಸದಸ್ಯರು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತುಕೊಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ, ವಿರಾಜಪೇಟೆಯ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎ. ಕೃಷ್ಣಮೂರ್ತಿ, ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಂಡಂಡ ಅಪ್ಪಚ್ಚು, ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಎಚ್.ವಿ. ಚಂದ್ರಶೇಖರ್, ಮೂರ್ನಾಡು ಕಂದಾಯಇಲಾಖೆಯ ಗ್ರಾಮಾಡಳಿತಾಧಿಕಾರಿ ಅಕ್ಷತ ಬಿ. ಶೆಟ್ಟಿ, ಬೆಂಗಳೂರಿನ ಸಿಗ್ಮಾ ನೆಟ್ ವರ್ಕ್ ಮಾಲೀಕ ಅವರೆಮಾದಂಡ ಶರಣ್ ಪೂಣಚ್ಚ ಮತ್ತು ಮೂರ್ನಾಡು ಪೊಲೀಸ್ ಉಪಠಾಣಾಧಿಕಾರಿ ಪಟ್ರಪಂಡ ಮೊಣ್ಣಪ್ಪ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕರವಂಡ ಕೆ. ಸಜನ್ ಗಣಪತಿ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ ಬಾಲು, ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞಿರಾಮ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮೂರ್ನಾಡು ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಮೂರ್ನಾಡು ಮುಸ್ಲಿಂ ಜಮಾಯತ್ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್, ಸಂಘದ ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಎಚ್.ಎಚ್. ಜಯಂತ್ ಕುಮಾರ್, ಸಹ ಕಾರ್ಯದರ್ಶಿ ದಿನೇಶ್ ರೈ ಉಪಸ್ಥಿತರಿದ್ದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಸಂಜೀವಿನಿ ಘನ ತ್ಯಾಜ್ಯ ವಿಂಗಡಣಾ ಘಟಕದ ಮಹಿಳಾ ಸಿಬ್ಬಂದಿ ಮತ್ತು ಕಳೆದ ಸಾಲಿನಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಅಲಂಕೃತಗೊಂಡ ಮೋಟಾರು ರಹಿತ ದ್ವಿಚಕ್ರ (ಸೈಕಲ್), ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರುಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ಮುಖ್ಯ ಅತಿಥಿಗಳು ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ವಿನೋದ್‌ಕರ್ ಅವರ ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪನಿಯ ರಾಹುಲ್ ರಾವ್ ಮತ್ತು ಸಂಗಡಿಗರಿಂದ ಜರುಗಿದ ನೃತ್ಯಗಳು, ಮೂರ್ನಾಡಿನ ಜಲಜ ನಾಗರಾಜ್ ಅವರ ಭಾರತೀಯ ನೃತ್ಯ ಕಲಾ ಶಾಲೆಯ ಕಲಾವಿದರ ಭರತನಾಟ್ಯ, ಜಾನಪದ ನೃತ್ಯಗಳು, ಮೂರ್ನಾಡಿನ ಚರಣ್ ಅವರ ಸ್ಟೆಪ್ ಕಲಾವಿದರ ನೃತ್ಯ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.