ಮಡಿಕೇರಿ: 38ಕ್ಕೂ ಅಧಿಕ ರೈತರು ತಂದಿದ್ದ 150ಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಕಂಡ ನೂರಾರು ರೈತರು, ಬೆಳೆಗಾರರು ಬೆರಗಾದರು. ಇಂತಹ ಅಪರೂಪದ ಕ್ಷಣಗಳನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಲು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಬಂದಿದ್ದ ಸುಮಾರು 250ಕ್ಕೂ ಅಧಿಕ ಮಂದಿ ಕಿಕ್ಕಿರಿದು ಸೇರಿದ್ದರು.
ಈ ಎಲ್ಲಾ ದೃಶ್ಯಾವಳಿಗಳು ಇಲ್ಲಿಗೆ ಸಮೀಪದ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶನಿವಾರ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿಧ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವ’ದಲ್ಲಿ ಕಂಡು ಬಂತು.
ರೈತರು ಹಾಗೂ ಬೆಳೆಗಾರರು ತಂದಿರಿಸಿದ್ದ ವೈವಿಧ್ಯಮಯ ಹಣ್ಣುಗಳಲ್ಲಿ ಕೊಡಗಿನ ಕಿತ್ತಳೆ, ಅಂಬಟೆ, ಹಲವು ವಿಧದ ನಿಂಬೆ, ಪಾಲೆಹಣ್ಣು, ರಸಬಾಳೆ, ಚಂದ್ರಬಾಳೆ, ಪಚ್ಚೆಬಾಳೆ, ಸಪೋಟ, ಸೀಬೆಕಾಯಿ, ಹಲಸು, ಬೆಣ್ಣೆಹಣ್ಣು, ಪ್ಯಾಶನ್ ಫ್ರೂಟ್, ಪಪ್ಪಾಯ, ಚಕೋತ, ಚೆರಿ, ನೆಲ್ಲಿಕಾಯಿ, ವಿದೇಶಿ ಹಣ್ಣುಗಳಾದ ರಾಂಬೂಟಾನ್, ಡ್ರಾಗನ್ ಫ್ರೂಟ್, ಮ್ಯಾಂಗೊಸ್ಟೀನ್, ಫ್ಯಾಷನ್ ಫ್ರೂಟ್, ಫಿಂಗರ್ ಬನಾನ, ಮೆಕಡೋಮಿಯ, ಚೆರಿಗೋವಾ, ರೋಲಿನಿಯಾ, ಹೀಗೆ ನಾನಾ ಬಗೆಯ ಹಣ್ಣುಗಳು ಅಲ್ಲಿದ್ದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನವದೆಹಲಿಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರೈತರ ಹಕ್ಕುಗಳ ಕಾಯ್ದೆಯ ಅಧ್ಯಕ್ಷರಾದ ಡಾ.ತ್ರಿಲೋಚನ್ ಮಹಾಪಾತ್ರ, ‘ರೈತರು ಹಾಗೂ ಬೆಳೆಗಾರರು ತಮ್ಮಲ್ಲಿರುವ ವಿಶಿಷ್ಟ ಹಾಗೂ ವಿಶೇಷ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ರೈತರ ಹಕ್ಕುಗಳ ಕಾಯ್ದೆ ಅನ್ವಯ ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಹಲವು ಪ್ರಯೋಜನಗಳು ದೊರೆಯುತ್ತವೆ’ ಎಂದು ತಿಳಿಸಿದರು.
ಸರ್ಕಾರವು ವಿವಿಧ ಬಗೆಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರು ಹಾಗೂ ಬೆಳೆಗಾರರು ಇವುಗಳನ್ನರಿತು ಅವುಗಳ ಲಾಭ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಭಾರತೀಯ ತೋಟಗಾರಿಕಾ ಸಂರಕ್ಷಣಾ ಸಂಘದ ನಿರ್ದೇಶಕ ಪ್ರೊ.ಟಿ.ಕೆ.ಬೆಹೆರ ಕೊಡಗಿನ ಕಿತ್ತಳೆಯ ಮಹತ್ವ ಕುರಿತು ಮಾತನಾಡಿದರು.
ಪ್ರಗತಿಪರ ಕ್ರಷಿಕ ಬೋಸ್ ಮಂದಣ್ಣ ಮಾತನಾಡಿ, ‘ಸ್ಥಳೀಯ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಇದನ್ನು ಮೊದಲು ಪರಿಹರಿಸಬೇಕು. ಈ ಕೇಂದ್ರದಲ್ಲಿ ವಿಜ್ಞಾನಿಗಳ ಹಾಗು ಸಿಬ್ಬಂದಿಯ ಕೊರತೆಯನ್ನು ಹೋಗಲಾಡಿಸಬೇಕು’ ಎಂದು ಒತ್ತಾಯಿಸಿದರು.
ಸಸ್ಯತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮದ ಬಗ್ಗೆ ಬೆಂಗಳೂರಿನ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಪ್ರಧಾನ ವಿಜ್ಞಾನಿಗಳಾದ ಡಾ.ಸಿ.ವಾಸುಗಿ ಹಾಗು ಹಣ್ಣಿನ ವೈಜ್ಞಾನಿಕ ಕೃಷಿಯ ಬಗ್ಗೆ ಅವರು ವಿಷಯ ಮಂಡಿಸಿದರು. 2 ಹಲಸಿನ ತಳಿಗಳನ್ನು ಬಿಡುಗಡೆ ಮಾಡಲಾಯಿತು.
ಹಣ್ಣುಗಳ ಪ್ರದರ್ಶನದಲ್ಲಿ ರವಿಶಂಕರ್ ಹಾಗೂ ಸುಧೀರ್ ಕುಮಾರ್ ಮಕ್ಕಿಮನೆ ಪ್ರಥಮ ಬಹುಮಾನ ₹ 5 ಸಾವಿರ, ನಿರ್ಮಲಾ ಜಯಪ್ರಕಾಶ್ ಹಾಗೂ ಎಂ.ಎಂ.ಸೋಮಯ್ಯ ದ್ವಿತೀಯ ಬಹುಮಾನ ₹ 3 ಸಾವಿರ, ಪುತ್ತರಿರ ಕರುಣ್ ಕಾಳಯ್ಯ ಹಾಗೂ ಪಿ.ಆರ್.ಮಂದಪ್ಪ ತೃತೀಯ ಬಹುಮಾನ ₹ 2 ಸಾವಿರವನ್ನು ಬಹುಮಾನವಾಗಿ ಪಡೆದುಕೊಂಡರು.
250ಕ್ಕೂ ಅಧಿಕ ಮಂದಿ ಭಾಗಿ ಹಲವು ವಿಜ್ಞಾನಿಗಳಿಂದ ಮಾಹಿತಿ ಹಂಚಿಕೆ
ರಾಂಬುಟಾನ್ ಮ್ಯಾಂಗೋಸ್ಟೀನ್‌ಗೆ ಉತ್ತಮ ಬೇಡಿಕೆ ಹಣ್ಣು ವಿಜ್ಞಾನಿ ಡಾ.ಬಿ.ಎಂ.ಮುರಳೀಧರ ಮಾತನಾಡಿ ‘ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ಹಣ್ಣುಗಳಿಗೆ ಉತ್ತಮ ಬೇಡಿಕೆ ಇದೆ. ಕಾಫಿ ಕೊಯ್ಲು ಇಲ್ಲದ ಸಂದರ್ಭದಲ್ಲಿ ಈ ಹಣ್ಣುಗಳು ಕೋಯ್ಲಿಗೆ ಬರುತ್ತವೆ. ಇದರಿಂದ ರೈತರಿಗೆ ಲಾಭವಾಗುತ್ತದೆ’ ಎಂದು ಆ ಹಣ್ಣುಗಳ ಮಹತ್ವ ಕುರಿತು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.