ಮಡಿಕೇರಿ: ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ಅಧಿಕವಿದ್ದರೂ, ಮತದಾನದಲ್ಲಿ ಪುರುಷರು ಮುಂದೆ ಇದ್ದಾರೆ. ಶುಕ್ರವಾರ ನಡೆದ ಮತದಾನದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 1.02ರಷ್ಟು ಹಾಗೂ ವಿರಾಜಪೇಟೆಯಲ್ಲಿ ಶೇ 0.33ರಷ್ಟು ಮಹಿಳೆಯರಿಗಿಂತ ಹೆಚ್ಚು ಮತದಾನವನ್ನು ಪುರುಷರು ಮಾಡಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಪುರುಷರ ಶೇಕಡಾವಾರು ಪ್ರಮಾಣ 75.94. ಮಹಿಳೆಯರ ಪ್ರಮಾಣ ಶೇ 74.92. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಪುರುಷರ ಪ್ರಮಾಣ ಶೇ 74.05. ಮಹಿಳೆಯರ ಪ್ರಮಾಣ ಶೇ 73.72. ಆದರೆ, 16 ತೃತೀಯ ಲಿಂಗಿಗಳ ಪೈಕಿ ಯಾರೊಬ್ಬರೂ ಮತದಾನ ಮಾಡಿಲ್ಲ.
ಮತದಾರರ ಸಂಖ್ಯೆಯನ್ನು ಗಮನಿಸಿದಾಗ ಮಡಿಕೇರಿ ಕ್ಷೇತ್ರದಲ್ಲಿ 6,438 ಹಾಗೂ ವಿರಾಜಪೇಟೆ ಕ್ಷೇತ್ರದಲ್ಲಿ 3,176, ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ 9,614ರಷ್ಟು ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದರು. ಹೀಗಾಗಿ, ಸಹಜವಾಗಿಯೇ ಮಹಿಳಾ ಮತದಾನದ ಪ್ರಮಾಣವೂ ಹೆಚ್ಚಳವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ ಮಹಿಳಾ ಮತದಾನದ ಪ್ರಮಾಣ ಕಡಿಮೆಯಾಗಿದೆ.
ಶೇಕಡಾವಾರು ಪ್ರಮಾಣದಲ್ಲಿ ಮಡಿಕೇರಿಯೇ ಮುಂದು!
ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ವಿರಾಜಪೇಟೆಗಿಂತ ಮಡಿಕೇರಿ ವಿಧಾನಸಭಾ ಕ್ಷೇತ್ರವೇ ಮುಂದಿದೆ. ಶೇ 1.53ರಷ್ಟು ಹೆಚ್ಚು ಮತದಾನ ಮಡಿಕೇರಿ ಕ್ಷೇತ್ರದಲ್ಲಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 75.41ರಷ್ಟು ಮತದಾನವಾಗಿದ್ದರೆ, ವಿರಾಜಪೇಟೆ ಕ್ಷೇತ್ರದಲ್ಲಿ ಶೇ 73.88ರಷ್ಟು ಮತದಾನವಾಗಿದೆ.
ಮೂಡಿಸಬೇಕಿದೆ ಇನ್ನಷ್ಟು ಜಾಗೃತಿ: ಕೊಡಗು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತ ಮತದಾನದ ಪ್ರಮಾಣ ಹೆಚ್ಚಿಸಲು ವ್ಯಾಪಕ ಕಸರತ್ತು ನಡೆಸಿತ್ತು. ವಿಶೇಷವಾಗಿ ರಂಗೋಲಿ ಸ್ಪರ್ಧೆಯಂತಹ ಚಟುವಟಿಕೆಗಳ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಲು ಶ್ರಮಿಸಿತ್ತು. ಆದರೆ, ಅದರ ಪ್ರಯತ್ನ ನಿರೀಕ್ಷೆಯಷ್ಟು ಫಲಿಸಲಿಲ್ಲ ಎಂಬುದು ಮಹಿಳೆಯರ ಮತದಾನದ ಶೇಕಡಾವಾರು ಪ್ರಮಾಣ ನೋಡಿದರೆ ತಿಳಿಯುತ್ತದೆ.
ಮುಂಬರುವ ಚುನಾವಣೆಗಳಲ್ಲಿ ಕೇವಲ ಚುನಾವಣಾ ಹೊಸ್ತಿಲಲ್ಲಿ ಮಾತ್ರವೇ ಜಾಗೃತಿ ಮೂಡಿಸದೇ ಜಿಲ್ಲೆಯಲ್ಲಿರುವ ಮಹಿಳೆಯರಲ್ಲಿ ಮತದಾನ ಕುರಿತು ಹೆಚ್ಚಿನ ಜಾಗೃತಿಯನ್ನು ನಿರಂತರವಾಗಿ ಮೂಡಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.