ADVERTISEMENT

ಮೂಲಸೌಕರ್ಯ ಒದಗಿಸಲು ಮುಕ್ಕೋಡ್ಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:19 IST
Last Updated 13 ಜೂನ್ 2025, 16:19 IST

ಮಡಿಕೇರಿ: ತಾಲ್ಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿಗೆ ಸೇರಿದ ಮುಕ್ಕೋಡ್ಲು ಗ್ರಾಮದ ಜನರು ಮೂಲಸೌಕರ್ಯ ಒದಗಿಸದೇ ಹೋದರೆ ಮಡಿಕೇರಿ– ಸೋಮವಾರಪೇಟೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಶುಕ್ರವಾರ ಎಚ್ಚರಿಕೆ ನೀಡಿದರು.

ತಂತಿಪಾಲದಿಂದ ಕಲ್ಲುಕೋಟೆಯವರೆಗಿನ 6–7 ಕಿ.ಮೀ ರಸ್ತೆಯು ತೀರಾ ದಯನೀಯವಾಗಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿಯೇ ಶಾಲಾ ಮಕ್ಕಳು ಸಂಚರಿಸಬೇಕಿದೆ. ಕೃಷಿ ಫಸಲು ಮಾರಾಟ ಮಾಡಲು ಸಾಗಾಣಿಕೆಯೂ ಇಲ್ಲಿ ಕಷ್ಟಕರವಾಗಿದೆ. ರೋಗಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತೀರಾ ತ್ರಾಸದಾಯಕವಾಗಿದೆ ಎಂದು ಗ್ರಾಮಸ್ಥರು ದೂರಿದರು.

ಮೊಬೈಲ್‌ ನೆಟ್‌ವರ್ಕ್‌ ಇಲ್ಲಿ ಸಿಗುವುದಿಲ್ಲ. ಸ್ವಲ್ಪ ಮಳೆ ಬಂದರೂ ವಿದ್ಯುತ್ ಸಂಪರ್ಕ ಕಡಿತಗೊಂಡು ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗುತ್ತದೆ. ಈ ಸಂಬಂಧ ಹಲವು ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಜನಪ್ರತಿನಿಧಿಗಳಿಂದ ಕೇವಲ ಭರವಸೆಗಳಷ್ಟೇ ಸಿಕ್ಕಿದೆ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.

‘ಮಕ್ಕಳನ್ನು ಹಟ್ಟಿಹೊಳೆಯವರೆಗೂ ಪೋಷಕರೇ ಬಿಡಬೇಕು. ವಿದ್ಯುತ್ ಹಾಗೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿದೆ’ ಎಂದರು.

ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಗಿರೀಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

‘₹ 10 ಕೋಟಿಗೆ 8 ಕಿ.ಮೀ ರಸ್ತೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗಿಡಗಂಟಿಗಳ ತೆರವು ಹಾಗೂ ಇನ್ನಿತರ ಕಾರ್ಯಗಳನ್ನು ನಡೆಸಲಾಗುವುದು’ ಎಂದು ಗಿರೀಶ್ ಭರವಸೆ ನೀಡಿದರು.

ಈ ಗ್ರಾಮದಲ್ಲಿ 50ರಿಂದ 60 ಕುಟುಂಬಗಳ 250 ಮಂದಿ ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.