ADVERTISEMENT

ಮಡಿಕೇರಿ| ಕ್ರೀಡಾಪಟುಗಳಿಂದ ಜಿಲ್ಲೆಗೆ ವಿಶೇಷ ಸ್ಥಾನ: ಶಾಸಕ ಅಪ್ಪಚ್ಚು ರಂಜನ್

ಮೈಸೂರು ವಿಭಾಗ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ನಾಪಂಡ ಎಂ. ರವಿ ಕಾಳಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:06 IST
Last Updated 19 ನವೆಂಬರ್ 2022, 6:06 IST
ಮೈಸೂರು ವಿಭಾಗಮಟ್ಟದ ಹಾಕಿ ಟೂರ್ನಿಗೆ ಮಡಿಕೇರಿ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಶುಕ್ರವಾರ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಚಾಲನೆ ನೀಡಿದರು, ಶಾಸಕ ಅಪ್ಪಚ್ಚು ರಂಜನ್ ಇದ್ದಾರೆ
ಮೈಸೂರು ವಿಭಾಗಮಟ್ಟದ ಹಾಕಿ ಟೂರ್ನಿಗೆ ಮಡಿಕೇರಿ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಶುಕ್ರವಾರ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಚಾಲನೆ ನೀಡಿದರು, ಶಾಸಕ ಅಪ್ಪಚ್ಚು ರಂಜನ್ ಇದ್ದಾರೆ   

ಮಡಿಕೇರಿ: ‘ಸ್ಪರ್ಧಿಗಳು ಕ್ರೀಡಾ ಮನೋಭಾವದಿಂದ ಆಡಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ’ ಎಂದು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ 2022-23ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೊಡಗು ಹಾಕಿ ಕ್ರೀಡೆಗೆ ಹೆಸರುವಾಸಿಯಾದ ಜಿಲ್ಲೆ. ಇಲ್ಲಿಯ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಕೊಡಗಿನವರಾದ ದೇವಯ್ಯ, ಗಣೇಶ್, ಗೋವಿಂದ ಮತ್ತು ಅರ್ಜುನ್ ಹಾಲಪ್ಪ ವಿಶೇಷ ಸ್ಥಾನಮಾನವನ್ನು ಹಾಕಿ ಕ್ರೀಡೆಯಲ್ಲಿ ಜಿಲ್ಲೆಗೆ ತಂದು ಕೊಟ್ಟಿದ್ದಾರೆ. ಸೋಮವಾರಪೇಟೆಯ ಸುನಿಲ್ ಭಾರತದ ಹಾಕಿ ತಂಡ ಪ್ರತಿನಿಧಿಸುತ್ತಿದ್ದಾರೆ’ ಎಂದರು.

ADVERTISEMENT

‘ಕೊಡಗಿನಲ್ಲಿ ಹಾಕಿ ಕ್ರೀಡಾ ಹಬ್ಬವಾಗಿದೆ, ಇದರೊಂದಿಗೆ ಬೇರೆ ಬೇರೆ ಜನಾಂಗದವರು ಸೇರಿ ಹಾಕಿ ಹಾಗೂ ಇನ್ನಿತರೆ ಕ್ರೀಡೆಗಳನ್ನು ನಡೆಸುತ್ತಿದ್ದು, ಕೊಡಗು ಕ್ರೀಡಾಪಟುಗಳ ಊರಾಗಿದೆ. ಕುಶಾಲನಗರದ ಕೂಡಿಗೆ, ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಹಾಕಿ ಟರ್ಫ್ ಮೈದಾನ ಆಗುತ್ತಿದೆ. ಜೊತೆಗೆ ಒಳಾಂಗಣ ಕ್ರೀಡಾಂಗಣ ಮತ್ತು ಈಜು ಕೊಳವನ್ನು ಕೂಡ ಜಿಲ್ಲೆಗೆ ನೀಡಿದ್ದು, ಒಟ್ಟು ₹15 ರಿಂದ ₹20 ಕೋಟಿ ಅನುದಾನ ನೀಡಲಾಗಿದೆ’ ಎಂದರು.

ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ. ರವಿ ಕಾಳಪ್ಪ ಮಾತನಾಡಿ, ‘ದೇಹ ಸದೃಢವಾಗಿರಲು ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಭಾಗವಹಿಸುವುದು ಅತಿ ಮುಖ್ಯ, ಕ್ರೀಡಾ ಪಟುಗಳು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವಂತಾಗಲಿ’ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪಿ.ಎಸ್.ಮಹೇಶ್, ಡಿಡಿಪಿಐ ವೇದಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಟಿ.ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಇದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪೊನ್ನಚ್ಚನ ಶ್ರೀನಿವಾಸ ಪ್ರಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಳಿನಿ ಸ್ವಾಗತಿಸಿದರು, ಅನಿತಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.