ಮಡಿಕೇರಿ: ವರ್ಷಗಟ್ಟಲೆ ಕಾಲ ಜೊತೆಯಲ್ಲಿದ್ದ ಹಿರಿಯ ಜೀವವೊಂದು ಸಾವನ್ನಪ್ಪಿದ ದುಃಖದಿಂದ ಹೊರಬರಲಾರದ ಕರುವೊಂದು ಮತ್ತೆ ಮತ್ತೆ ‘ನಂದೀಶ’ನ ದೇಹವನ್ನು ನೇವರಿಸುತ್ತಿದ್ದ ದೃಶ್ಯ ಸೇರಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ಇಲ್ಲಿನ ಓಂಕಾರೇಶ್ವರ ದೇಗುಲದ ಆವರಣದಲ್ಲಿ ಇಂತಹದ್ದೊಂದು ಭಾವಾನಾತ್ಮಕ ದೃಶ್ಯ ಕಂಡು ಬಂತು.
ದೇವಸ್ಥಾನದಲ್ಲಿದ್ದ ಹಿರಿಯ ಎತ್ತು ‘ನಂದೀಶ’ ವಯೋಸಹಜ ಕಾರಣಗಳಿಂದ ನಿಧನವಾಯಿತು. ಇದರ ಅಂತ್ಯಕ್ರಿಯೆ ನೆರವೇರಿಸಲು ಪುರೋಹಿತರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದ ವೇಳೆ ಅಲ್ಲೇ ಇದ್ದ ‘ಕಾವೇರಿ’ ಹಸುವಿನ ಕರು ‘ಗಣೇಶ’ ಮತ್ತೆ ಮತ್ತೆ ಬಂದು ಎತ್ತಿನ ದೇಹವನ್ನು ನೇವರಿಸುತ್ತಿತ್ತು.
2009ರಿಂದಲೂ ಇಲ್ಲಿಯೇ ಇದ್ದ ‘ನಂದೀಶ’ ಎತ್ತಿನ ದೇಹವನ್ನು ಸಮೀಪದಲ್ಲೆ ಸಂಪಿಗೆಮರದ ಸಮೀಪ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಇಂತಹದ್ದೊಂದು ಭಾವನಾತ್ಮಕ ಸನ್ನಿವೇಶಕ್ಕೆ ಸುಮಾರು 50ಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಸಂತೋಷ್ ಭಟ್ ಅವರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ಜರುಗಿದವು. ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು, ಹಿಂದಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಮೇಶ್ ಹೊಳ್ಳ, ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.