ಕುಶಾಲನಗರ: ಸಿಕಲ್ ಸೆಲ್ (ಕುಡುಗೋಲು ರಕ್ತಕಣ) ಅನುವಂಶೀಯ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚುವ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಜೀವವನ್ನು ಉಳಿಸಬಹುದು ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಇಂದೂಧರ್ ಹೇಳಿದರು.
ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಿಎಂ ಜನ್ ಮನ್ ಕಾರ್ಯಕ್ರಮ–2025ರ ಅಡಿ ತಾಲ್ಲೂಕಿನ ನಂಜರಾಯಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಶ್ವ ಸಿಕಲ್ ಸೆಲ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿವಾಸಿ ಸಮುದಾಯದವರಲ್ಲಿ ಹೆಚ್ಚಾಗಿ ಕಂಡು ಬರುವ ಸಿಕಲ್ ಸೆಲ್ ಕಾಯಿಲೆಯನ್ನು 2047ರೊಳಗೆ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾಯಿಲೆಯ ನಿರ್ಮೂಲನೆಗೆ ಹೆಚ್ಚಿನ ಜಾಗೃತಿ ಅಗತ್ಯ ಎಂದರು.
ಇದೇ ವೇಳೆ ಸಿಕಲ್ ಸೆಲ್ ಸ್ಕ್ರೀನಿಂಗ್ ಮಾಡಲಾಯಿತು ಹಾಗೂ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿಶ್ವಜ್ಞಾ, ಜನಾರ್ದನ್ ರಾವ್, ಕದಂ, ಪ್ರೇಮ್ ಹಾಗೂ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳಾದ ಪ್ರಿಯಾ, ಪ್ರೇಮಾ, ಹರ್ಷಿತಾ, ರಾಕೇಶ್, ಐಟಿಡಿಪಿ ಯೋಜನೆಯ
ಚಂದನ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.