ADVERTISEMENT

ನಾಪೋಕ್ಲು: ರಂಜಿಸಿದ ಕೆಸರುಗದ್ದೆ ಹಗ್ಗಜಗ್ಗಾಟ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 15:22 IST
Last Updated 15 ಆಗಸ್ಟ್ 2024, 15:22 IST
ಭಾಗಮಂಡಲದಲ್ಲಿ ಗುರುವಾರ ನಡೆದ ಮಹಿಳೆಯರ ವಿಭಾಗದ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೋರಂಗಾಲ ಲೇಡೀಸ್ ಕ್ಲಬ್ ತಂಡ ಪ್ರಥಮ ಸ್ಥಾನವನ್ನು ಗಳಿಸಿ ಸಂಭ್ರಮಿಸಿದರು
ಭಾಗಮಂಡಲದಲ್ಲಿ ಗುರುವಾರ ನಡೆದ ಮಹಿಳೆಯರ ವಿಭಾಗದ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೋರಂಗಾಲ ಲೇಡೀಸ್ ಕ್ಲಬ್ ತಂಡ ಪ್ರಥಮ ಸ್ಥಾನವನ್ನು ಗಳಿಸಿ ಸಂಭ್ರಮಿಸಿದರು   

ನಾಪೋಕ್ಲು: ಜಿನುಗು ಮಳೆಯ ನಡುವೆ ಲೇ..ಲೇ..ಲೈಸಾ..ಉದ್ಗೋಷಗಳ ಹಿನ್ನೆಲೆಯ ನಡುವೆ ಕೆಸರು ಗದ್ದೆ ಹಗ್ಗಜಗ್ಗಾಟ ಸ್ಪರ್ಧೆ ವೀಕ್ಷಕರನ್ನು ರಂಜಿಸಿತು.

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾಗಮಂಡಲ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಗುರುವಾರ ಅಧಿಕ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.

ಅಂತಿಮ ಪಂದ್ಯದಲ್ಲಿ ಪುರುಷರ ವಿಭಾಗದ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೋರಂಗಾಲ ಬಿ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನವನ್ನು ಪಯಸ್ವಿನಿ ಸಂಪಾಜೆ ತಂಡ ಗೆದ್ದುಕೊಂಡಿತು. ಮಹಿಳೆಯರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೋರಂಗಾಲ ಲೇಡೀಸ್ ಕ್ಲಬ್ ತಂಡ ಪ್ರಥಮ ಸ್ಥಾನವನ್ನು ಮಹಾದೇವ ಸ್ಪೋರ್ಟ್ಸ್ ಬಲಮುರಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.

ADVERTISEMENT

ಕ್ರೀಡಾಕೂಟದ ಉದ್ಘಾಟನೆಯನ್ನು ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿನೆರವೇರಿಸಿದರು. ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಜೇನು ಕೃಷಿಕರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ತಾವೂರು ಗ್ರಾಮದ ಮೇಜರ್ ಡಾ. ಕುಶವಂತ್ ಕೋಳಿ ಬೈಲು ಇವರನ್ನು ಸನ್ಮಾನಿಸಲಾಯಿತು.

ಭಾಗಮಂಡಲದಲ್ಲಿ ಗುರುವಾರ ನಡೆದ ಪುರುಷರ ವಿಭಾಗದ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೋರಂಗಾಲ ಬಿ  ತಂಡದ ಸದಸ್ಯರು ಟ್ರೋಫಿ ಹಿಡಿದು ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.