ನಾಪೋಕ್ಲು: ಗ್ರಾಮೀಣ ಪ್ರದೇಶದ ಹದಗೆಟ್ಟ ರಸ್ತೆಗಳಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ. ಮಳೆಗಾಲ ಆರಂಭವಾಗಿದ್ದು, ಗುಂಡಿಬಿದ್ದ ರಸ್ತೆಗಳಿಂದ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬೇತು ಗ್ರಾಮದಿಂದ ತೋಟಗಾರಿಕಾ ಸಸ್ಯ ಕ್ಷೇತ್ರದ ಬಳಿಯ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಮಡಿಕೇರಿಯ ಮುಖ್ಯರಸ್ತೆ ಸಂಪರ್ಕಿಸುವವರಿಗೆ ಇದು ಕಡಿಮೆ ಅಂತರದ ಮಾರ್ಗವಾಗಿದ್ದು, ಇಲ್ಲಿ ವಾಹನಗಳ ಓಡಾಟ ಹೆಚ್ಚು. ಆದರೆ ಈ ಕಿರು ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ಹಲವರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯುದ್ದಕ್ಕೂ ಡಾಂಬರು ಕಿತ್ತು ಹೋಗಿದ್ದು, ಜಲ್ಲಿಗಳ ರಾಶಿಯೇ ಕಾಣುತ್ತಿದೆ.
ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಇನ್ನು ನಾಪೋಕ್ಲು ಬಳಿಯ ಬೇತು-ಬಲಮುರಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಕ್ಕಬ್ಬೆ ಹೊಳೆಗೆ ಎತ್ತು ಕಡು ಸೇತುವೆ ನಿರ್ಮಾಣವಾದ ಬಳಿಕ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಪಟ್ಟಣದಿಂದ ಸಾಕಷ್ಟು ವಾಹನಗಳು ಬಲಮುರಿ ಮೂಲಕ ಮೂರ್ನಾಡು ಹಾಗೂ ಪಾರಾಣೆ ಮೂಲಕ ವಿರಾಜಪೇಟೆ ತಲುಪಲು ಈ ಮಾರ್ಗವನ್ನು ಬಳಸುತ್ತಿದ್ದಾರೆ.
ಈ ರಸ್ತೆಯ ಮಕ್ಕಿಶಾಸ್ತಾವು ದೇವಾಲಯದ ಬಳಿಯಿಂದ ಸೇತುವೆಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸೇತುವೆಯ ಬಳಿ ಕೆಸರುಮಯ ಸ್ಥಳದಲ್ಲಿ ಅನತಿದೂರ ಕಾಂಕ್ರಿಟ್ ರಸ್ತೆ ನಿರ್ಮಿಸಿ ಸರಿಪಡಿಸಲಾಗಿದೆ. ಇನ್ನುಳಿದ ಭಾಗದಲ್ಲಿ ಜಲ್ಲಿ ಕಲ್ಲುಗಳೇ ಇವೆ. ಈ ರಸ್ತೆಯ ಸ್ವಲ್ಪ ಭಾಗ ತಗ್ಗಿನಲ್ಲಿದ್ದು, ರಸ್ತೆಯ ಇಕ್ಕೆಲಗಳು ಗದ್ದೆಗಳಿಂದ ಆವೃತವಾಗಿದೆ.
ಮಳೆಗಾಲದಲ್ಲಿ ರಸ್ತೆಯಲ್ಲಿ ಸಾಗುವುದು ಪ್ರಯಾಸಕರ. ಗ್ರಾಮ ಪಂಚಾಯಿತಿ ವತಿಯಿಂದ ಗದ್ದೆ ಬದಿಯಲ್ಲಿ ತೋಡು ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
‘ಎತ್ತು ಕಡು ಸೇತುವೆಯ ಬಳಿ ಕಮಾನು ದ್ವಾರ ನಿರ್ಮಿಸಿ ಮಕ್ಕಿ ದೇವಾಲಯದ ರಸ್ತೆ ಎಂದು ಸೂಚನಾ ಫಲಕ ಅಳವಡಿಸಲಾಗುವುದು. ರಸ್ತೆ ಅಭಿವೃದ್ಧಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕಾಳೆಯಂಡ ಸಾಬಾ ತಿಮ್ಮಯ್ಯ ತಿಳಿಸಿದರು.
ಪಟ್ಟಣದ ರಸ್ತೆಯೂ ಹಾಳಾಗಿದೆ. ಹಳೆ ಊರಿನ ಪೊನ್ನುಮುತ್ತಪ್ಪ ದೇವಾಲಯದ ಬಳಿ ರಸ್ತೆಗುಂಡಿ ಬಿದ್ದಿದೆ. ಅಪ್ಪಚ್ಚ ಕವಿ ರಸ್ತೆಯಲ್ಲೂ ಹೊಂಡಗಳಿವೆ. ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆಯ ಬೆಟ್ಟಗೇರಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿವೆ. ಶೀಘ್ರ ರಸ್ತೆ ದುರಸ್ತಿ ಕೈಗೊಳ್ಳಬೇಕು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ ನಿರ್ಮಿಸಬೇಕು ಎಂದು ಬೆಟ್ಟಗೇರಿಯ ನಿವಾಸಿ ಕಾವೇರಪ್ಪ ಆಗ್ರಹಿಸಿದರು.
ಮಳೆಗಾಲದಲ್ಲಿ ಸಮಸ್ಯೆ ಉಲ್ಪಣವಾಗಲಿದೆ. ಶೀಘ್ರ ದುರಸ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
Quote - ಬೇತು-ಬಲಮುರಿ ಗ್ರಾಮಗಳನ್ನು ಸಂಪರ್ಕಿಸುವ ತಗ್ಗುರಸ್ತೆಯನ್ನು ಎತ್ತರಿಸಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುವುದು ಕಾಳೆಯಂಡ ಸಾಬಾ ತಿಮ್ಮಯ್ಯ ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.