ADVERTISEMENT

ದೇಶಕ್ಕೆ ಹೊಸ ದಿಕ್ಕು ನೀಡಿದ ಮೋದಿ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 3:14 IST
Last Updated 11 ಜೂನ್ 2025, 3:14 IST
ಕ್ಯಾ‍ಪ್ಟನ್ ಗಣೇಶ್ ಕಾರ್ಣಿಕ್
ಕ್ಯಾ‍ಪ್ಟನ್ ಗಣೇಶ್ ಕಾರ್ಣಿಕ್   

ಮಡಿಕೇರಿ: ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದು ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶ ಹಲವು ಆಯಾಮಗಳಲ್ಲಿ ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಿಸುವ ಕೆಲಸ ಮಾಡಿದರು. ಅವರು ಬಂದ ಮೇಲೆ ಇರುವ ಗೌರವ ಹಿಂದೆ ಇದ್ದಿರಲಿಲ್ಲ’ ಎಂದರು.

‘ಸೇನೆಯಲ್ಲಿ ಆತ್ಮನಿರ್ಭರತೆಯ ಮೂಲಕ ಗಡಿ ರಕ್ಷಣೆಗೆ ಆದ್ಯತೆ ನೀಡಿ, ಸೇನೆಗೆ ಮೂಲಸೌಕರ್ಯಗಳನ್ನು ಒದಗಿಸಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದರು’ ಎಂದರು.

ADVERTISEMENT

‘ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಅವರು ಗಮನ ನೀಡಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದರು. ಇದರಿಂದ ವಾಹನಗಳ ಚಲಿಸುವ ವೇಗ ಹೆಚ್ಚಾಯಿತು. ಮಾತ್ರವಲ್ಲ, ಅಪಾರ ಪ್ರಮಾಣದ ಇಂಧನದ ಉಳಿತಾಯವೂ ಆಯಿತು’ ಎಂದರು.

‘ವಿವಿಧ ಯೋಜನೆಗಳಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹಾಕುವ ಪರಿಪಾಠ ಆರಂಭಿಸಿದ್ದರಿಂದ ಮಧ್ಯವರ್ತಿಯ ಹಾವಳಿ ನಿಂತಿತು. ಯೋಜನೆಗಳ ಸಂಪೂರ್ಣ ಪ್ರಯೋಜನ ಫಲಾನುಭವಿಗಳಿಗೆ ದಕ್ಕಿತು. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಯ ಹಣ ಮಧ್ಯವರ್ತಿಗಳ ಮೂಲಕ ಸೋರಿ ಹೋಗುತ್ತಿತ್ತು’ ಎಂದು ಅವರು ಹೇಳಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಶೇ 8.2 ಇದ್ದ ಹಣದುಬ್ಬರ ಈಗ ಶೇ 5ಕ್ಕೆ ಇಳಿದಿದೆ. 2 ಕೋಟಿ ಇದ್ದ ಉದ್ಯೋಗ ಸೃಷ್ಟಿ, 17 ಕೋಟಿಗೆ ಹೆಚ್ಚಿದೆ. ಬಹುಆಯಾಮದ ಬಡತನದ ಪ್ರಮಾಣ ಶೇ 29.2ರಿಂದ ಶೇ 11.3ಕ್ಕೆ ಇಳಿದಿದೆ. 3.9 ಕೋಟಿ ಇದ್ದ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 9.2 ಕೋಟಿಗೆ ಏರಿಕೆಯಾಗಿದೆ. 248 ಕಿ.ಮೀ ಇದ್ದ ಮೆಟ್ರೊ 1,013 ಕಿ.ಮೀಗೆ ಏರಿಕೆಯಾಗಿದೆ’ ಎಂದು ಅವರು ಅಂಕಿ–ಅಂಶಗಳನ್ನು ಪ್ರಸ್ತಾಪಿಸಿದರು.

‘ಕರ್ನಾಟಕಕ್ಕೂ ಕೇಂದ್ರದ ಬಿಜೆಪಿ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ರಸ್ತೆ, ರೈಲ್ವೆ, ನಗರಾಭಿವೃದ್ಧಿ, ಇಂಧನ ಹಾಗೂ ಇತರೆ ಕ್ಷೇತ್ರಗಳಲ್ಲಿ ₹ 5 ಲಕ್ಷ ಕೋಟಿಗಳಿಗೂ ಹೆಚ್ಚು ಹೂಡಿಕೆ ಮಾಡಿದೆ. 1,860 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯದಲ್ಲಿ ನಿರ್ಮಿಸಿದೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ₹ 8,408 ಕೋಟಿಯನ್ನು ವಿನಿಯೋಗಿಸಿದೆ, ಬೆಂಗಳೂರಿನ ಸೆಟಲೈಟ್‌ ಟೌನ್ ಹೊರವರ್ತುಲ ರಸ್ತೆಗೆ ₹ 27 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದೆ’ ಎಂದು ಅವರು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ, ಮುಖಂಡರಾದ ಕಿಲನ್ ಗಣಪತಿ, ಚಲನ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.