
ಮಡಿಕೇರಿ: ಭಾರತೀಯ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127ನೇ ಜಯಂತಿ ಪ್ರಯುಕ್ತ ಬುಧವಾರ ಇಲ್ಲಿನ ರೋಶನಾರದಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಲಾಯಿತು. ಅವರಿಗೆ ಪ‍್ರಿಯವಾಗಿದ್ದ ಗೀತಗಾಯನ ಕಾರ್ಯಕ್ರಮ ನಡೆಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ನೆಚ್ಚಿನ ಮನೆಯಾಗಿದ್ದ ನಗರದ ಹೊರವಲಯದಲ್ಲಿನ ರೋಶನಾರ ಬಳಿಯಲ್ಲಿರುವ ಕಾರ್ಯಪ್ಪ ಅವರ ಸಮಾಧಿ ಸ್ಥಳಕ್ಕೆ ಹಲವು ಮಂದಿ ಪುಷ್ಪನಮನ ಸಲ್ಲಿಸಿದರು. ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತೆಗಳನ್ನು ಹಾಡಿದರು.
ಈ ವೇಳೆ ಮಾತನಾಡಿದ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾಕಾರ್ಯಪ್ಪ, ‘ಪ್ರತೀಯೊಬ್ಬ ಭಾರತೀಯನಿಗೂ ತನ್ನ ದೇಶ ಮೊದಲಾಗಬೇಕು. ಭಾರತೀಯತೆ ಆದ್ಯತೆಯಾಗಿರಬೇಕು. ಕೃತಕ ಬುದ್ದಿಮತ್ತೆಯ ಪ್ರಬಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಮಾಧ್ಯಮಗಳಲ್ಲಿ ಬಂದದ್ದೆಲ್ಲಾ ನಿಜವಾಗಿರುವುದಿಲ್ಲ. ಯಾವುದೇ ವಿಚಾರಗಳನ್ನು ಪರಾಮರ್ಶಿಸಿ’ ಎಂದು ಕಿವಿಮಾತು ಹೇಳಿದರು.
‘ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಎಲ್ಲಾ ಸೌಲಭ್ಯಗಳೊಂದಿಗೆ ದೇಶಸೇವೆಗೆ ಪ್ರಾಮುಖ್ಯತೆ ನೀಡುವ ಭಾರತೀಯ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಆದ್ಯತೆ ನೀಡಿ’ ಎಂದೂ ಅವರು ಹೇಳಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರಿ ನಳಿನಿ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಜ್ಯೋತಿ ಬೆಳಗಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೂಡಿಗೆ ಸೈನಿಕ ಶಾಲಾ ಕೆಡೆಟ್ ಧ್ರುವ್ ಭಾರದ್ವಜ್ ಅವರಿಗೆ ಕಾರ್ಯಪ್ಪ ಅವರ ಸೊಸೆ ಮೀನಾ ಕಾರ್ಯಪ್ಪ ಟ್ರೋಫಿ ಪ್ರದಾನ ಮಾಡಿದರು.
ಕೊಕ್ಕಲೇರ ಮಹತ್ವ ಅಪ್ಪಯ್ಯ ಅವರು ಕಾರ್ಯಪ್ಪ ಕುರಿತು ಮಾಹಿತಿ ನೀಡಿದರು. ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಹೇಳಿಕೆಗಳನ್ನು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ವಾಚಿಸಿದರು.
ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರಾದ ಗುರುದತ್, ನಿಯತಾ ದೇವಯ್ಯ, ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ನಿವೃತ್ತ ಕರ್ನಲ್ ಬಿ.ಜಿ.ವಿ.ಕುಮಾರ್, ಕರ್ನಲ್ ಕಾವೇರಪ್ಪ ಪ್ರೇಮ್ ನಾಥ್, ಬಾಬು ಸೋಮಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.