
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಉದ್ಘಾಟಿಸಿದರು.
ಗೋಣಿಕೊಪ್ಪಲು: 10ಕ್ಕೂ ಅಧಿಕ ಶಾಲಾ, ಕಾಲೇಜುಗಳ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಭಾಗಿಯಾದರು.
ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ವಾಮಿವಿವೇಕಾನಂದ ಅವರ ಭಾವಚಿತ್ರದೊಂದಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಾಮಕೃಷ್ಣ ಶಾರದಾಶ್ರಮದವರೆಗೆ ಮೆರವಣಿಗೆ ನಡೆಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ, ‘ಹಿಂದೂ ಧರ್ಮದ ತತ್ವಗಳನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ವೀರ ಸನ್ಯಾಸಿ ವಿವೇಕಾನಂದ. ಭಾರತ ಮಾತೆಯ ಮುಕುಟಕ್ಕೆ ಧರ್ಮದ ಕಿರೀಟ ತೊಡಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಇಂಥ ವೀರ ಸನ್ಯಾಸಿಯ ತತ್ವಾದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ‘ಬಲಿಷ್ಠ ಯುವ ಜನರೆ ದೇಶದ ಆಸ್ತಿ ಎಂದು ಸ್ವಾಮಿ ವಿವೇಕಾನಂದ ನಂಬಿದ್ದರು’ ಎಂದು ಹೇಳಿದರು.
‘ಬಲಿಷ್ಠವಾದ ಒಂದು ನೂರು ಯುವಕರನ್ನು ನನ್ನ ಕೈಗೆ ಕೊಡಿ. ಈ ದೇಶದ ಭವಿಷ್ಯವನ್ನೇ ಬದಲಾಯಿಸುತ್ತೇನೆ ಎಂದು ವಿವೇಕಾನಂದರು ಹೇಳುತ್ತಿದ್ದರು. ಯುವ ಶಕ್ತಿಯ ಬಗ್ಗೆ ಅವರಿಗೆ ಅಪಾರವಾದ ಭರವಸೆ ಇತ್ತು. ಇಂಥ ಯುವ ಜನಾಂಗ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ಕಟ್ಟುವ ಕಡೆಗೆ ಗಮನಹರಿಸಬೇಕು’ ಎಂದರು.
ನೆಹರೂ ಯುವ ಕೇಂದ್ರ ಹಾಗೂ ಜಿಲ್ಲಾಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಮುಖಂಡರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಎ.ಎಸ್.ಟಾಟುಮೊಣ್ಣಪ್ಪ, ಕಂದ ದೇವಯ್ಯ ಭಾಗವಹಿಸಿದ್ದರು.
‘ವಿವೇಕಾನಂದರ ಆದರ್ಶಗಳು’ ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.
ಕಾವೇರಿ ಕಾಲೇಜಿನಲ್ಲಿ ಜಯಂತಿ
ಸ್ಥಳೀಯ ಕಾವೇರಿ ಕಾಲೇಜಿನಲ್ಲಿ ನಡೆದ ಜಯಂತಿಯಲ್ಲಿ ಮಾತನಾಡಿದ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ‘ದೇಶದ ಭವಿಷ್ಯವನ್ನು ಬರೆಯಲಿರುವ ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ದೇಶವನ್ನು ಸದೃಢವಾಗಿ ಮುನ್ನಡೆಸಲು ಪಣ ತೊಡಬೇಕು’ ಎಂದು ಹೇಳಿದರು. ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಭವ್ಯ ಭಾರತದ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು ಜನಿಸಿದ ಪುಣ್ಯ ದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ. ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕವಾಗಿದ್ದು ಇವುಗಳನ್ನು ಪಾಲನೆ ಮಾಡಬೇಕು. ಇಂದಿನ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಗುಂಗಿನಲ್ಲಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇಡೀ ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದ ಸಂಸದ್ಕೃತಿಯನ್ನು ಯಾರು ಕೂಡ ಮರೆಯಬಾರದು. ದೇಶಕ್ಕಾಗಿ ಶ್ರಮಿಸಿದಂತಹ ಮಹನೀಯರ ಜೀವನ ಚರಿತ್ರೆ ಓದುವ ಮೂಲಕ ವಿದ್ಯಾರ್ಥಿಗಳು ಶಿಸ್ತು ಸಂಯಮ ಬೆಳೆಸಿಕೊಂಡು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ಉಪನ್ಯಾಸಕ ಕ್ಯಾಪ್ಟನ್ ಬೈಟ ಕುಮಾರ್ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಲೆಫ್ಟಿನೆಂಟ್ ಎಂ.ಆರ್.ಆಕ್ರಂ ಎನ್ಎಸ್ಎಸ್ ಅಧಿಕಾರಿ ಚೇತನ್ ಚಿಣ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.