ADVERTISEMENT

ಮಡಿಕೇರಿ: ಶುಂಠಿ ಬೆಳೆಗೆ ಹೊಸ ಕಾಯಿಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 7:01 IST
Last Updated 6 ಫೆಬ್ರುವರಿ 2025, 7:01 IST
<div class="paragraphs"><p>ಹೊಸ ಶಿಲೀಂಧ್ರ ಕಾಯಿಲೆ ತುತ್ತಾದ ಶುಂಠಿ ಒಣಗಿರುವ ಸ್ಥಿತಿಯಲ್ಲಿರುವುದು</p></div>

ಹೊಸ ಶಿಲೀಂಧ್ರ ಕಾಯಿಲೆ ತುತ್ತಾದ ಶುಂಠಿ ಒಣಗಿರುವ ಸ್ಥಿತಿಯಲ್ಲಿರುವುದು

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯನ್ನು ಈಚೆಗೆ ಇನ್ನಿಲ್ಲದಂತೆ ಬಾಧಿಸಿದ್ದ ಹೊಸ ಶಿಲೀಂಧ್ರ ರೋಗವನ್ನು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಕೋಯಿಕೋಡ್‌ನ ವಿಜ್ಞಾನಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಇದರ ನಿಯಂತ್ರಣಕ್ಕೆ ಸಲಹೆಗಳನ್ನೂ ನೀಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಒಣಗಲು ಆರಂಭವಾಗಿತ್ತು. ಮಾತ್ರವಲ್ಲ, ಕಾಂಡದ ಒಣಗುವಿಕೆಯೂ ಬೇಗನೆ ನಡೆದು ಗೆಡ್ಡೆಗಳ ತೂಕವು ಶೇ 30ರಷ್ಟು ಕಡಿಮೆಯಾಗಿತ್ತು. ಏಕಾಏಕಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಹೊಸ ಬಗೆಯ ಕಾಯಿಲೆಯಿಂದ ಬೆಳೆಗಾರರು ಆತಂಕದಲ್ಲಿದ್ದರು.

ADVERTISEMENT

ಇದಕ್ಕೆ ಸ್ಪಂದಿಸಿದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಇಲ್ಲಿನ ಅಪ್ಪಂಗಳದ ಪ್ರಾದೇಶಿಕ ಕಚೇರಿಯ ವಿಜ್ಞಾನಿಗಳು ರೋಗಪೀಡಿತ ಶುಂಠಿ ಸಸ್ಯಗಳ ಮಾದರಿಗಳನ್ನು ಕೋಯಿಕೋಡ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಬಹಳಷ್ಟು ವೇಳೆ ಪ್ರಯೋಗಾಲಯ ತಲುಪುವ ಹೊತ್ತಿಗೆ ಸಸ್ಯವು ಒಣಗಿ ಹೋಗಿರುತ್ತಿತ್ತು. 4–5 ಬಾರಿ ಮಾದರಿಗಳನ್ನು ಕಳುಹಿಸಿಕೊಡಲಾಯಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಕೊಡಗಿನ ಅಪ್ಪಂಗಳದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಡಾ. ಅಂಕೇಗೌಡ, ‘ಸಾಕಷ್ಟು ಶ್ರಮ ವಹಿಸಿ ಪ್ರಯೋಗಾಲಯಕ್ಕೆ ರೋಗಪೀಡಿತ ಸಸ್ಯಗಳ ಮಾದರಿಗಳನ್ನು ಕಳುಹಿಸಿಕೊಡಲಾಯಿತು. ಅಂತಿಮವಾಗಿ ವಿಜ್ಞಾನಿಗಳಿಗೆ ಪ್ರಯೋಗಾಲಯದಲ್ಲಿ ಇದು ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದಿಂದ ಹರಡುವ ಕಾಯಿಲೆ ಎಂಬುದು ಖಚಿತಪಟ್ಟಿತು’ ಎಂದು ಹೇಳಿದರು.

ಒಮ್ಮೆ ಈ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ.  ಇದು ತೀವ್ರವಾದ ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ. ರೋಗಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿದ್ದರೂ, ಗೆಡ್ಡೆಗಳ ತೂಕ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ರೋಗಕ್ಕೆ ಕಾರಣ ಏನು?

ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದಾಗಿಯೇ ರೋಗ ಹರಡುವಿಕೆ ಹೆಚ್ಚಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಬೆಳಿಗ್ಗೆ ಇಬ್ಬನಿ ಬೀಳಲು ಆರಂಭಿಸಿತು. ಇದು ಶಿಲೀಂಧ್ರ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸಿತು. ಇದು ಕೊಡಗಿನ ಮತ್ತು ಸುತ್ತಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಯಿತು ಎಂದು ಅವರು ಹೇಳುತ್ತಾರೆ.

ನಿಯಂತ್ರಣ ಕ್ರಮಗಳು

ಶುಂಠಿ ಬಿತ್ತನೆಗೂ ಮುನ್ನವೇ ಬೀಜದ ಗೆಡ್ಡೆಗಳನ್ನು ಔಷಧಗಳಿಂದ ಉಪಚರಿಸಿದರೆ ಮುಂದೆ ಈ ರೋಗ ಬಾರದಂತೆ ತಡೆಗಟ್ಟಬಹುದು ಎಂದು ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಕೊಡಗಿನ ಅಪ್ಪಂಗಳದ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಡಾ. ಅಂಕೇಗೌಡ ಹೇಳುತ್ತಾರೆ.

ಒಂದು ಲೀಟರ್‌ ನೀರಿಗೆ ಶಿಲೀಂಧ್ರ ನಾಶಕ ಪ್ರೊಪಿಕೊನಜೋಲ್ ಅನ್ನು 1 ಎಂ.ಎಲ್‌ನಷ್ಟು ಅಥವಾ ಒಂದು ಲೀಟರ್ ನೀರಿಗೆ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂನಷ್ಟು ಬೆರೆಸಿ ಬೀಜದ ಗೆಡ್ಡೆಗಳನ್ನು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.

‘ರೋಗ ನಿರೋಧಕ ಕ್ರಮವಾಗಿ ನಾಟಿ ಮಾಡಿದ 4 ತಿಂಗಳ ಒಳಗೆ ಒಂದು ಲೀಟರ್ ನೀರಿಗೆ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್‌ ಅನ್ನು ಒಂದು ಲೀಟರ್‌ ನೀರಿಗೆ 1 ಎಂಎಲ್‌ನಷ್ಟು ಬೆರೆಸಿ ಸಿಂಪಡಿಸಬೇಕು. ಇದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಶುಂಠಿ ಗೆಡ್ಡೆಗಳನ್ನು ನೆಡುವ ಮೊದಲು ಈ ಕ್ರಮಗಳನ್ನು ಅನುಸರಿಸಿ’ ಎಂದು ಅವರು ಸಲಹೆ ನೀಡುತ್ತಾರೆ.

ವಿಜ್ಞಾನಿಗಳ ಗಮನ ಸೆಳೆದಿದ್ದ ‘ಪ್ರಜಾವಾಣಿ’
‘ಪ್ರಜಾವಾಣಿ’ 2024ರ ನವೆಂಬರ್ 20ರಂದು ‘ವೇಗವಾಗಿ ಒಣಗುತ್ತಿರುವ ಶುಂಠಿ’ ಎಂಬ ಶೀರ್ಷಿಕೆಯಡಿ ಶುಂಠಿ ಬೆಳೆಗೆ ಬಂದಿರುವ ಹೊಸ ಬಗೆಯ ಕಾಯಿಲೆ ಕುರಿತು ವರದಿ ಮಾಡಿ ತೋಟಗಾರಿಕಾ ಇಲಾಖೆ ಹಾಗೂ ವಿಜ್ಞಾನಿಗಳ ಗಮನ ಸೆಳೆದಿತ್ತು.

‘ಪ್ರಜಾವಾಣಿ’ 2024ರ ನವೆಂಬರ್ 20ರಂದು ‘ವೇಗವಾಗಿ ಒಣಗುತ್ತಿರುವ ಶುಂಠಿ’ ಎಂಬ ಶೀರ್ಷಿಕೆಯಡಿ ಶುಂಠಿ ಬೆಳೆಗೆ ಬಂದಿರುವ ಹೊಸ ಬಗೆಯ ಕಾಯಿಲೆ ಕುರಿತು ವರದಿ ಮಾಡಿ ವಿಜ್ಞಾನಿಗಳ ಗಮನ ಸೆಳೆದಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.