ADVERTISEMENT

ಕೊಡಗು ಪ್ರಕೃತಿ ವಿಕೋಪ: ₹ 89.9 ಕೋಟಿ ವೈಯಕ್ತಿಕ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2019, 13:48 IST
Last Updated 28 ಮೇ 2019, 13:48 IST
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಸಂತ್ರಸ್ತರ ಪರಿಹಾರ ಅದಾಲತ್‌ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು 
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಸಂತ್ರಸ್ತರ ಪರಿಹಾರ ಅದಾಲತ್‌ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು    

ಮಡಿಕೇರಿ: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮಾನವ ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ವಿವಿಧ ಹಾನಿಗಳ ಸಂಬಂಧ ಪರಿಹಾರ ಒಟ್ಟು ₹ 89.91 ಕೋಟಿ ವೈಯಕ್ತಿಕ ಪರಿಹಾರವನ್ನು ಸಂತ್ರಸ್ತರಿಗೆ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಮಾನವ ಜೀವ ಹಾನಿ ಅನುಕಂಪ ಭತ್ಯೆ 21 ಪ್ರಕರಣಗಳಿಗೆ ಎನ್‌ಡಿಆರ್‌ಎಫ್/ ಎಸ್‌ಡಿಆರ್‌ಎಫ್ ಹಾಗೂ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಡಿ ₹ 1.37 ಕೋಟಿ, ಜಾನುವಾರು ಪ್ರಾಣ ಹಾನಿಯ 127 ಪ್ರಕರಣಗಳಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಡಿ ₹ 28.2 ಲಕ್ಷ, ದಿನಬಳಕೆಯ ವಸ್ತು ಹಾನಿಗೆ ಸಂಬಂಧಿಸಿದಂತೆ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ ₹ 3,800) 4,400 ಪ್ರಕರಣಗಳಿಗೆ ₹ 1.67 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಾಸದ ಮನೆ ಹಾನಿಯ 4,254 ಪ್ರಕರಣಗಳಿಗೆ ₹ 15.87 ಕೋಟಿ, ಮನೆ ಹಾನಿ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ ₹ 50 ಸಾವಿರ) 1,021 ಪ್ರಕರಣಗಳಿಗೆ ₹ 5.10 ಕೋಟಿ, ವಾಸದ ಮನೆ ಹಾನಿ ಮನೆ ಬಾಡಿಗೆಗೆ ಸಂಬಂಧಿಸಿದಂತೆ 480 ಪ್ರಕರಣಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 48 ಲಕ್ಷ , ಮನೆ ಬಾಡಿಗೆಗೆ ಸಂಬಂಧ 415 ಪ್ರಕರಣಗಳಿಗೆ ಸಿಎಂ ನಿಧಿಯಿಂದ ₹ 2.75 ಕೋಟಿ, ಸ್ವಂತ ನಿವೇಶನದಲ್ಲಿ ಮನೆ ಮಾಡಿಕೊಳ್ಳಲು ಇಚ್ಛಿಸಿದ 54 ಪ್ರಕರಣಗಳಿಗೆ ₹ 1.80 ಕೋಟಿ ವಿತರಿಸಲಾಗಿದೆ ಎಂದು ಹೇಳಿದರು.

ADVERTISEMENT

ಬೆಳೆಹಾನಿ ಪರಿಹಾರ: ಪ್ರವಾಹದಿಂದ ಉಂಟಾದ ಬೆಳೆಹಾನಿಯ 32,198 ಪ್ರಕರಣಗಳಿಗೆ ₹ 38.50 ಕೋಟಿ, ಭೂಕುಸಿತದಿಂದ ಬೆಳೆ ಹಾನಿ ನಷ್ಟಕ್ಕೆ 1,185 ಪ್ರಕರಣಗಳಿಗೆ ₹ 2.97 ಕೋಟಿ, ಗದ್ದೆಗಳಲ್ಲಿ ಮಣ್ಣು ತುಂಬಿ ಬೆಳೆಹಾನಿಯ 351 ಪ್ರಕರಣಗಳಿಗೆ ₹ 20.92 ಕೋಟಿ ಹಣ ಸಂಸ್ರಸ್ತರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ₹ 89.91 ಕೋಟಿ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಉಳಿದಂತೆ ಎಲ್ಲಾ ಫಲಾನುಭವಿಗಳ ವಿವರವನ್ನು ಕೊಡಗು ಜಿಲ್ಲಾ ವೆಬ್‌ಸೈಟ್ https://kodagu.nic.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪರಿಹಾರ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ತಕರಾರುಗಳಿದ್ದಲ್ಲಿ ಸಾರ್ವಜನಿಕರು 29ರಂದು ಜಿಲ್ಲಾಡಳಿತ ಭವನದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 18ರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಪರಿಹಾರ ಅದಾಲತ್‌ಗೆ ಆಗಮಿಸಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು ಎಂದೂ ಕೋರಿದ್ದಾರೆ.

ಪರಿಹಾರ ಅದಾಲತ್: ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿರುವ ಮೂರು ದಿನಗಳ ಪರಿಹಾರ ಅದಾಲತ್‌ನಲ್ಲಿ ಎರಡನೇ ದಿನವಾದ ಮಂಗಳವಾರ ಸಹ ನೂರಾರು ಸಂತ್ರಸ್ತರು ಪಾಲ್ಗೊಂಡು ತಮ್ಮ ಹೆಸರು ನೋಂದಾಯಿಸಿಕೊಂಡರು. ಬೆಳೆ, ಮನೆ ಹಾನಿ ಮತ್ತಿತರ ಬಗ್ಗೆ ಪರಿಹಾರಕ್ಕಾಗಿ ಮನವಿ ಮಾಡಿದರು. ಪರಿಹಾರ ಅದಾಲತ್ ಸ್ಥಳಕ್ಕೆ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.