ADVERTISEMENT

‘ನಿಫಾ’: ಕೊಡಗಿನ ಗಡಿಭಾಗದಲ್ಲಿ ಕಟ್ಟೆಚ್ಚರ

ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ, ಮುನ್ನೆಚ್ಚರಿಕಾ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:43 IST
Last Updated 6 ಜೂನ್ 2019, 13:43 IST
ಮಡಿಕೇರಿಯ ಡಿಎಚ್‌ಒ ಕಚೇರಿಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಅಧ್ಯಕ್ಷತೆಯಲ್ಲಿ ‘ನಿಫಾ’ ವೈರಸ್ ಜಾಗೃತಿ ಸಭೆ ನಡೆಯಿತು
ಮಡಿಕೇರಿಯ ಡಿಎಚ್‌ಒ ಕಚೇರಿಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಅಧ್ಯಕ್ಷತೆಯಲ್ಲಿ ‘ನಿಫಾ’ ವೈರಸ್ ಜಾಗೃತಿ ಸಭೆ ನಡೆಯಿತು   

ಮಡಿಕೇರಿ: ‘ನಿಫಾ’ ವೈರಸ್ ಕೊಡಗು ಜಿಲ್ಲೆಯಲ್ಲಿ ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್ ಅವರು ತಿಳಿಸಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಬುಧವಾರ ‘ನಿಫಾ’ ವೈರಸ್ ಜಾಗೃತಿ ಸಭೆಯಲ್ಲಿ ಮಾತನಾಡಿದಅವರು, ‘ನಿಫಾ’ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಜಿಲ್ಲೆಯಲ್ಲೂ ಕೂಡ ಆದ್ಯತಾ ಪಟ್ಟಿಯಲ್ಲಿರುವುದರಿಂದ ನಿಫಾ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಇಂದಿನಿಂದ ಕಾರ್ಯಾಗಾರ:
ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೂನ್ 7ರಿಂದ 10ರವರೆಗೆ ‘ನಿಫಾ’ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ವೈದ್ಯರಿಗೆ, ಶುಶ್ರೂಷಕರಿಗೆ, ಆಶಾ ಕಾರ್ಯಕರ್ತೆಯರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಿಫಾ ವೈರಸ್ ಕಂಡುಬಂದ ಸಂದರ್ಭದಲ್ಲಿ ರೋಗಿಗಳಿಗೆ ಉಪಚರಿಸಲು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಯ ವಿಶೇಷ ತುರ್ತು ಚಿಕಿತ್ಸಾ ನಿಗಾ ಘಟಕ ತೆರೆಯಲು ಸೂಚಿಸಲಾಗಿದೆ ಎಂದರು.

ಜಿಲ್ಲೆಯ ಹಾಡಿಗಳು, ಗಿರಿಜನರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಡಾ.ಕೆ. ಮೋಹನ್ ಸೂಚಿಸಿದರು.

ಒಂದು ವೇಳೆ ರೋಗಿಗಳಲ್ಲಿ ನಿಫಾ ವೈರಸ್ ಕಂಡು ಬಂದಲ್ಲಿ ಎಲ್ಲಾ ಬೆಂಬಲಾತ್ಮಕ ಔಷಧ ಮೂಲಕ ಉಪಚರಿಸಲಾಗುವುದು. ಅಗತ್ಯವಿರುವ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಹೇಳಿದರು.

ನಿಫಾ ವೈರಸ್ ಹರಡುವಿಕೆ, ರೋಗದ ಲಕ್ಷಣಗಳು, ಅಗತ್ಯ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ಸರ್ವೇಕ್ಷಣಾ ಘಟಕದ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ಸಭೆಯಲ್ಲಿ ಮಾಹಿತಿ ನೀಡಿ, ಸಾರ್ವಜನಿಕರಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ. ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.