ADVERTISEMENT

ಸರ್ಕಾರಕ್ಕಿಂತ ಮೊದಲೇ ರೋಟರಿಯಿಂದ ಮನೆ ಹಸ್ತಾಂತರ

ಸಂತ್ರಸ್ತರ ಮೊಗದಲ್ಲಿ ಅರಳಿದ ನಗು, ಇನ್ನೂ 25 ಮನೆ ನಿರ್ಮಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:30 IST
Last Updated 18 ಜೂನ್ 2019, 17:30 IST
ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಸಂಸ್ಥೆ ನಿರ್ಮಿಸಿರುವ ಮನೆ 
ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಸಂಸ್ಥೆ ನಿರ್ಮಿಸಿರುವ ಮನೆ    

ಮಡಿಕೇರಿ: ಮಳೆಗಾಲ ಆರಂಭವಾದರೂ, ಕೊಡಗು ನೆರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಇನ್ನೂ ಮನೆ ಹಸ್ತಾಂತರವಾಗಿಲ್ಲ. ಆದರೆ, ರೋಟರಿ ಸಂಸ್ಥೆ ನಿರ್ಮಿಸಿದ್ದ 25 ಮನೆಗಳು ಸಂತ್ರಸ್ತರ ಕೈಸೇರಿವೆ. ಅವರ ಮೊಗದಲ್ಲಿ ನಗು ಅರಳಿದ್ದು, ಕೊನೆಗೂ ಸೂರು ಸಿಕ್ಕ ಸಂತಸ ಆ ಕುಟುಂಬಗಳಲ್ಲಿ ಕಾಣುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲು ಗ್ರಾಮದ ಆಶ್ರಯ ಕಾಲೊನಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, ರೋಟರಿ ಅಂತರರಾಷ್ಟ್ರೀಯ ಸಂಸ್ಥೆ ಮಾಜಿ ಅಧ್ಯಕ್ಷ ಕಲ್ಯಾಣ್‌ ಬ್ಯಾನರ್ಜಿ ಅವರು ಫಲಾನುಭವಿಗಳಿಗೆ ಕೀ ನೀಡುವ ಮೂಲಕ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದರು.

ಒಂದು ಮಲಗುವ ಕೋಣೆ, ಹಾಲ್‌, ಅಡುಗೆ ಮನೆ ಸೌಲಭ್ಯವುಳ್ಳ ಒಟ್ಟು 25 ಮನೆಗಳನ್ನು ಪ್ರಥಮ ಹಂತದಲ್ಲಿ ನಿರ್ಮಿಸಲಾಗಿದೆ. ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅಗತ್ಯವಿದ್ದರೆ, ಸಂತ್ರಸ್ತರು ಸ್ವಂತ ದುಡ್ಡಿನಲ್ಲಿ ಮತ್ತೊಂದು ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ಮಾರ್ಚ್ 28ರಂದು ಕಾಮಗಾರಿ ಆರಂಭಗೊಂಡಿತ್ತು. ಆಧುನಿಕ ತಂತ್ರಜ್ಞಾನ ಬಳಸಿ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದು ವಿಶೇಷ. ಪ್ರತಿ ಮನೆಗೆ ₹ 5 ಲಕ್ಷ ವೆಚ್ಚದಂತೆ ಒಟ್ಟು ₹ 1.25 ಕೋಟಿಯಲ್ಲಿ ರೋಟರಿ ಸಂಸ್ಥೆ ಪುನರ್ವಸತಿ ಕಲ್ಪಿಸಿದೆ.

ADVERTISEMENT

ಜಿಲ್ಲಾಡಳಿತವು ಸಂತ್ರಸ್ತರ ಪಟ್ಟಿಯಿಂದ ಕೈಬಿಟ್ಟಿದ್ದ ಭಾಗಶಃ ಹಾನಿಯಾದ, ವಾಸಕ್ಕೆ ಯೋಗ್ಯವಲ್ಲದ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳನ್ನು ಗುರುತಿಸಿ ಅವರದ್ದೇ ಜಾಗದಲ್ಲಿ ರೋಟರಿ ಸಂಸ್ಥೆ ಮನೆ ನಿರ್ಮಿಸಿಕೊಟ್ಟಿದೆ.

‘ಕಳೆದ ವರ್ಷದ ಮಳೆಯಲ್ಲಿ ಮನೆ ಸಂಪೂರ್ಣ ಜಖಂಗೊಂಡಿತ್ತು. ಜಿಲ್ಲಾಡಳಿತವೂ ಫಲಾನುಭವಿಗಳ ಪಟ್ಟಿಯಿಂದ ಕೈಬಿಟ್ಟಿತ್ತು. ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದೆವು. ರೋಟರಿ ಸಂಸ್ಥೆ ನೆರವಾಗಿದ್ದು ಅವರ ಸಹಾಯ ಮರೆಯುವುದಿಲ್ಲ’ ಎಂದು ಇಗ್ಗೋಡ್ಲು ಗ್ರಾಮದ ಫಲಾನುಭವಿ ಚಂದ್ರು ಹೇಳಿದರು.

‘ಕಳೆದ ವರ್ಷ ಕೇರಳ ಹಾಗೂ ಕೊಡಗಿನಲ್ಲಿ ಭಾರೀ ಮಳೆ ಸುರಿದು ದುರಂತ ಸಂಭವಿಸಿತ್ತು. ಬಡವರಿಗೆ ಹಾಗೂ ಸಂಕಷ್ಟದಲ್ಲಿ ಇದ್ದವರಿಗೆ ನೆರವಾಗುವುದಕ್ಕಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಇನ್ನೂ 25 ಮನೆ ನಿರ್ಮಾಣಕ್ಕೆ ದಾನಿಗಳಿಂದ ಹಣ ಸಂಗ್ರಹಿಸಿ ನೀಡಲಾಗುವುದು. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಕಲ್ಯಾಣ್‌ ಬ್ಯಾನರ್ಜಿ ಭರವಸೆ ನೀಡಿದರು.

‘ದೇಶದಲ್ಲಿ ಹಲವರಿಗೆ ಇನ್ನೂ ಸೂರು ಸಿಕ್ಕಿಲ್ಲ. ರಸ್ತೆ ಬದಿ ಕಾಲ ಕಳೆಯುವ ಸ್ಥಿತಿಯಿದೆ. ಸೂರಿಲ್ಲದವರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ರೋಟರಿ ಮುಂದಾಗಬೇಕು. ಮನೆ ನಿರ್ಮಾಣವು ಪುಣ್ಯದ ಕೆಲಸ. ಮಹಿಳೆ ಹಾಗೂ ಮಕ್ಕಳಿಗೆ ಸ್ವಂತದಾದ ಸೂರು ಇದ್ದರೆ ಭದ್ರತೆ ಭಾವನೆ ಮೂಡುತ್ತದೆ’ ಎಂದು ಬ್ಯಾನರ್ಜಿ ಹೇಳಿದರು.

ಸರ್ಕಾರದ ಮನೆ ಇನ್ನೂ ಸಿಕ್ಕಿಲ್ಲ
ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಜಿಲ್ಲೆಯ ಕರ್ಣಂಗೇರಿ, ಮದೆನಾಡು ಹಾಗೂ ಜಂಬೂರಿನಲ್ಲಿ 840 ಮನೆ ನಿರ್ಮಿಸುತ್ತಿದ್ದು ಜೂನ್‌ ಮುಗಿಯುತ್ತ ಬಂದರೂ ಮನೆಗಳ ಹಸ್ತಾಂತರವಾಗಿಲ್ಲ. ಕರ್ಣಂಗೇರಿಯಲ್ಲಿ 38 ಮನೆ ನಿರ್ಮಾಣ ಕಾರ್ಯವು ಮುಕ್ತಾಯವಾಗಿದ್ದು ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಪ್ರಥಮ ಹಂತದಲ್ಲಿ 428 ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು.

**
ಕೊನೆಗೂ ಸ್ವಂತ ಸೂರು ಸಿಕ್ಕಿದೆ. ಇನ್ನು ನೆಮ್ಮದಿಯಿಂದ ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತೇನೆ.
-ಸಾರಮ್ಮ, ಇಗ್ಗೋಡ್ಲು ಗ್ರಾಮದ ಫಲಾನುಭವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.