ADVERTISEMENT

ರೆಸಾರ್ಟ್‌ ಯೋಜನೆ: ತನಿಖೆಗೆ ಒತ್ತಾಯ

ಅಕ್ರಮ ಎಸಗಿರುವ ಕಂದಾಯ ನಿರೀಕ್ಷಕರನ್ನು ಬಂಧಿಸಲು ಉಳಿಯಡ ಪೂವಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:50 IST
Last Updated 23 ಆಗಸ್ಟ್ 2019, 9:50 IST
ಬ್ರಹ್ಮಗಿರಿ ತಪ್ಪಲಿನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ರೆಸಾರ್ಟ್‌ ನಿರ್ಮಿಸಲು ಮುಂದಾಗಿದ್ದು ಅದನ್ನು ವಿರೋಧಿಸಿ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ‘ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ’ ಸದಸ್ಯರು ಪ್ರತಿಭಟಿಸಿದರು
ಬ್ರಹ್ಮಗಿರಿ ತಪ್ಪಲಿನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ರೆಸಾರ್ಟ್‌ ನಿರ್ಮಿಸಲು ಮುಂದಾಗಿದ್ದು ಅದನ್ನು ವಿರೋಧಿಸಿ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ‘ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ’ ಸದಸ್ಯರು ಪ್ರತಿಭಟಿಸಿದರು   

ಮಡಿಕೇರಿ: ‘ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಕಂದಾಯ ನಿರೀಕ್ಷಕರೊಬ್ಬರು ರೆಸಾರ್ಟ್‌ ನಿರ್ಮಾಣಕ್ಕೆ ಮುಂದಾಗಿದ್ದು ಆತನನ್ನು ಬಂಧಿಸಬೇಕು’ ಎಂದು ತಲಕಾವೇರಿ ಮೂಲ ಸ್ವರೂಪ ಹಿತರಕ್ಷಣಾ ವೇದಿಕೆ ಸದಸ್ಯ ಉಳಿಯಡ ಪೂವಯ್ಯ ಅವರು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅದು ಅರಣ್ಯ ಇಲಾಖೆಗೆ ಸೇರಿದ ಜಾಗ. ಅರಣ್ಯಾಧಿಕಾರಿಗಳೇ ಸ್ಪಷ್ಟಪಡಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ಅಧಿಕಾರಿಯ ಬಂಧನವಾಗಿಲ್ಲ. ತನಿಖೆ ನಡೆಸಿ ಆ ಅಧಿಕಾರಿಯನ್ನು ಬಂಧಿಸಬೇಕಿತ್ತು. ಆತ ಪ್ರಭಾವಿಯಿರುವ ಕಾರಣಕ್ಕೆ ವಿಳಂಬವಾಗುತ್ತಿದೆ. ಕೂಡಲೇ ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪರಿಹಾರ ಧನ ಪಡೆದ ಅಧಿಕಾರಿ:

‘2018ರಲ್ಲಿ ಕೊಡಗಿನ ಉತ್ತರ ಭಾಗದಲ್ಲಿ ಜಲಪ್ರಳಯ ಸಂಭವಿಸಿತ್ತು. ಅಂದು ಸಂತ್ರಸ್ತರಾದ ಎಷ್ಟೋ ಮಂದಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದರೆ, ಈ ಕಂದಾಯ ಅಧಿಕಾರಿ, ₹ 32 ಸಾವಿರದಷ್ಟು ಪರಿಹಾರವನ್ನು ಎರಡು ಕಂತಿನಲ್ಲಿ ಪಡೆದುಕೊಂಡಿದ್ದಾರೆ. ಚೇರಂಗಾಲ ಗ್ರಾಮಸ್ಥರ ಬಳಿ ಆ ದಾಖಲೆಗಳೂ ಇವೆ’ ಎಂದು ಮಾಹಿತಿ ನೀಡಿದರು.

‘ತಲಕಾವೇರಿ ಕ್ಷೇತ್ರವು ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದಿದೆ. ಅದರ ಪಾವಿತ್ರ್ಯತೆ ಇಳಿಯಬೇಕು. ಆದರೆ, ಕೋಳಿಕಾಡು ಸಮೀಪ ನೂರಾರು ಮರ ಕಡಿದು ರೆಸಾರ್ಟ್‌ ನಿರ್ಮಿಸಲು ಸರ್ಕಾರಿ ಅಧಿಕಾರಿಯೇ ಮುಂದಾಗಿದ್ದಾರೆ. ನಾಲ್ಕು ಎಕರೆಯಷ್ಟು ಅಕ್ರಮ – ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ. ಉಳಿದ 18 ಎಕರೆಯಷ್ಟು ಒತ್ತುವರಿ ಮಾಡಿಕೊಂಡು ಅಲ್ಲಿ ರೆಸಾರ್ಟ್‌ ನಿರ್ಮಿಸಲು ಗುಡ್ಡವನ್ನೇ ಸಮತಟ್ಟು ಮಾಡಲಾಗಿದೆ. ಗುಡ್ಡ ಕುಸಿದರೆ ಹತ್ತಾರು ವರ್ಷಗಳಿಂದ ಕೋಳಿಕಾಡಿನಲ್ಲಿ ವಾಸವಿರುವ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲಿಗೆ ಅಧಿಕಾರಿಗಳು ಭೇಟಿ ನೀಡಿ, ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಮುಖಂಡ ಸಿರಿಗೆರೆ ನಾಗೇಶ್‌ ಒತ್ತಾಯಿಸಿದರು.

ಯುಕೊ ಸಂಘಟನೆಯ ಮುಖ್ಯಸ್ಥ ಮಂಜು ಚಿಣ್ಣಪ್ಪ ಮಾತನಾಡಿ, ‘ಕೋಳಿಕಾಡಿನಲ್ಲಿ ಸಂಪೂರ್ಣ ಕಾನೂನು ಉಲ್ಲಂಘಿಸಿ ರೆಸಾರ್ಟ್‌ ಯೋಜನೆ ರೂಪಿಸಲಾಗಿದೆ. ಎರಡು ವರ್ಷದಿಂದ ಭೂಕುಸಿತ, ಜಲಪ್ರಳಯದಿಂದ ಜಿಲ್ಲೆಯ ಜನರು ಸಾಕಷ್ಟು ನೋವುಂಡಿದ್ದಾರೆ. ಮತ್ತೆ ಅಕ್ರಮಕ್ಕೆ ಅವಕಾಶ ನೀಡಿದರೆ ಜಿಲ್ಲೆಯ ಜನರು ತೊಂದರೆಗೆ ಸಿಲುಕುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೊರೆ ಸೋಮಣ್ಣ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.