ADVERTISEMENT

ಆಮದು, ರಫ್ತು ನೀತಿ ಬಲಪಡಿಸಲು ಆಗ್ರಹ

ರೈತ ಸಂಘದ ಕಾರ್ಯಕರ್ತರ ಸಮಾವೇಶ, ಕಾಫಿ- ಕಾಳುಮೆಣಸು ಆಮದು ನೀತಿ ಸಂವಾದ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 12:34 IST
Last Updated 2 ಏಪ್ರಿಲ್ 2019, 12:34 IST
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಕೊಡಗು ರೈತ ಸಂಘದ ಸಹಯೋಗದಲ್ಲಿ ನಡೆದ ರೈತ ಸಂಘ ಕಾರ್ಯಕರ್ತರ ಸಮಾವೇಶದಲ್ಲಿ ರೈತ ಸಂಘದ ಮುಖಂಡರು 
ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಕೊಡಗು ರೈತ ಸಂಘದ ಸಹಯೋಗದಲ್ಲಿ ನಡೆದ ರೈತ ಸಂಘ ಕಾರ್ಯಕರ್ತರ ಸಮಾವೇಶದಲ್ಲಿ ರೈತ ಸಂಘದ ಮುಖಂಡರು    

ಪೊನ್ನಂಪೇಟೆ: ‘ಕೇಂದ್ರ ಸರ್ಕಾರ ಆಮದು ಹಾಗೂ ರಫ್ತು ನೀತಿಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ರೈತ ಸಂಘ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಮಂಗಳವಾರ ಕೊಡಗು ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ಸಂಘ ಕಾರ್ಯಕರ್ತರ ಸಮಾವೇಶ ಹಾಗೂ ಕಾಫಿ-ಕಾಳುಮೆಣಸು ಆಮದು ನೀತಿ ಸಂವಾದದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಆಮದು ಹಾಗೂ ರಫ್ತು ನೀತಿಯನ್ನು ಬಲಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಬೆಳೆಗಾರರ ರಕ್ಷಣೆಗೆ ಪೂರಕವಾದ ನೀತಿಯನ್ನು ಅನುಸರಿಸಲು ಎಡವುತ್ತಿರುವುದರಿಂದ ಬೆಲೆ ಕುಸಿತ ಸಮಸ್ಯೆಯಿಂದ ರೈತ ನಿತ್ಯ ನರಳುವಂತಾಗಿದೆ. ಬೆಳೆ ನಷ್ಟದೊಂದಿಗೆ ಬೆಲೆ ಕುಸಿತಕ್ಕೆ ಒಳಗಾಗಿ ನಷ್ಟದಲ್ಲಿ ಜೀವನ ಸಾಗಿಸುವ ಕಾಲ ಬಂದೊದಗಿದೆ’ ಎಂದು ಹೇಳಿದರು.

ADVERTISEMENT

‘ರೈತ ಸಂಘ ಶಿಸ್ತು, ಸಂಯಮದಿಂದ ತನ್ನದೇ ಆದ ಛಾಪು ಮೂಡಿಸಿಕೊಂಡಿದೆ. ರೈತ ಸಂಘದ ಹೋರಾಟದಿಂದ ಸಾಕಷ್ಟು ಮುಖಂಡರು ಬೆಳೆದಿದ್ದಾರೆ. ಇದನ್ನು ಅರಿತುಕೊಂಡು ಶಿಸ್ತಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ‘ದೇಶದಲ್ಲಿ ಬೇಡಿಕೆಗೆ ಸಾಕಾಗುವಷ್ಟು ಕಾಫಿ– ಕಾಳುಮೆಣಸು ಶೇ 85 ಉತ್ಪನ್ನಗಳು ಲಭ್ಯವಿದೆ. ಆದರೂ, ಕಳ್ಳದಾರಿಯಲ್ಲಿ ದೇಶಕ್ಕೆ ಸಾಗಣೆಯಾಗುತ್ತಿರುವುದರಿಂದ ಇಲ್ಲಿನ ಉತ್ಪನ್ನಗಳ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ. ಕೇಂದ್ರ ಸರ್ಕಾರ ಕಳ್ಳದಾರಿಗೆ ಸಹಕಾರ ನೀಡಬಾರದು’ ಎಂದು ಒತ್ತಾಯಿಸಿದರು.

ಇದರಿಂದ ರೈತನಿಗೆ ನೇರ ಹೊಡೆತ ಬೀಳುತ್ತಿದೆ. ಇದನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವಂತಾಗಬೇಕು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.

ಹಿಂದಿನಿಂದ ರಾಜಕೀಯ ಪಕ್ಷಗಳಿಗೆ ರೈತ ಪರ ನಿಲುವುಗಳು ಚುನಾವಣಾ ಚರ್ಚಾ ವಿಚಾರಗಳಾಗಿರಲಿಲ್ಲ. ರೈತ ಪರ ಹೋರಾಟಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಒಂದಷ್ಟು ಸಮಸ್ಯೆಗಳು ಸಮಾಜಕ್ಕೆ ಅರಿವಾಗುತ್ತಿದ್ದರೂ, ಚುನಾವಣಾ ಚರ್ಚಾ ವಿಚಾರವಾಗಿ ರೈತರ ಸಮಸ್ಯೆಗಳು ಬಿಂಬಿತವಾಗುತ್ತಿಲ್ಲ. ಬದಲಾಗಿ ಪಕ್ಷಗಳ ಹಗರಣಗಳು, ಪಕ್ಷಗಳ ಪರ-ವಿರೋಧ ಚರ್ಚೆಗಳು ಮಾತ್ರ ಚುನಾವಣೆಯ ಚರ್ಚಾ ಅಸ್ತ್ರವಾಗುತ್ತಿದೆ. ಇದರಿಂದ ರೈತ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖಂಡ ಲಾಲಾ ಪೂಣಚ್ಚ ಮಾತನಾಡಿ, ರೈತರ ಸಮಸ್ಯೆ ಕೇಂದ್ರಕ್ಕೆ ನೇರವಾಗಿ ತಲುಪಲು ರೈತ ಸಂಘ ರಾಜಕೀಯ ಪಕ್ಷವಾಗಿ ಚುನಾವಣೆ ಎದುರಿಸಿ ನಮ್ಮದೇ ಆದ ಮಂತ್ರಿಗಳ ಮೂಲಕ ಮಾತ್ರ ಸಾಧ್ಯ. ಯವ ಪಕ್ಷದ ಮುಖಂಡರು ನೇರವಾಗಿ ರೈತ ಸಂಘಕ್ಕೆ ಬೆಂಬಲ ನೀಡುವುದಿಲ್ಲ. ಇದನ್ನು ಪರಿಗಣಿಸಿ ಭವಿಷ್ಯದಲ್ಲಿ ಚುನಾವಣೆಯ ಮೂಲಕ ಸರ್ಕಾರಕ್ಕೆ ಉತ್ತರ ನೀಡಬೇಕಾಗಿದೆ. ನಮ್ಮದೇ ಮಂತ್ರಿಗಳ ಆಯ್ಕೆಯಿಂದ ನಮ್ಮ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ಪ್ರಗತಿ ಪರ ಕೃಷಿ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಸರ್ಕಾರ ಸಾಲ ಮನ್ನಾ ಮಾಡುವುದರಿಂದ ಪ್ರಯೋಜನವಿಲ್ಲ. ಬೆಂಬಲ ಬೆಲೆ ನೀಡಿದರೆ ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟು ಆರ್ಥಿಕ ಬೆಳವಣಿಗೆಯಾಗಲು ಸಾಧ್ಯವಿದೆ. ಬೆಂಬಲ ಬೆಲೆ ಘೋಷಿಸಿ ರೈತರನ್ನು ರಕ್ಷಿಸಿಬೇಕು ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಸುಜಯ್, ಎಂ.ರಾಮ, ಅಶ್ವತ್ಥ್‌ ನಾರಾಯಣ, ಹೊಸಕೋಟೆ ಬಸವರಾಜ್, ರವಿಕುಮಾರ್, ಹೊಸೂರು ಕುಮಾರ್, ಚೆಪ್ಪುಡೀರ ಕಾರ್ಯಪ್ಪ, ಕೆಚ್ಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.