ADVERTISEMENT

ವೃದ್ಧೆ ಕೊಲೆ: ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:30 IST
Last Updated 23 ಫೆಬ್ರುವರಿ 2019, 13:30 IST
ನಾಪೋಕ್ಲು ಸಮಿಪದ ಕುಂಬಳದಾಳು ಗ್ರಾಮದಲ್ಲಿ ಕೊಲೆ ಆರೋಪಿಗಳ ಪತ್ತೆಗಾಗಿ ಶ್ವಾನ ದಳದಿಂದ ಶೋಧ ನಡೆಯಿತು
ನಾಪೋಕ್ಲು ಸಮಿಪದ ಕುಂಬಳದಾಳು ಗ್ರಾಮದಲ್ಲಿ ಕೊಲೆ ಆರೋಪಿಗಳ ಪತ್ತೆಗಾಗಿ ಶ್ವಾನ ದಳದಿಂದ ಶೋಧ ನಡೆಯಿತು   

ನಾಪೋಕ್ಲು: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ವೃದ್ಧೆಯೊಬ್ಬರ ಕೊಲೆಯಾಗಿದ್ದು, ಕೊಲೆಗಡುಕರು ಬೀರುವಿನಲ್ಲಿದ್ದ 100 ಗ್ರಾಂ ಚಿನ್ನ ದೋಚಿದ್ದಾರೆ.

ಕುಂಬಳದಾಳು ಗ್ರಾಮದ ದಿವಂಗತ ಕರ್ಣಯ್ಯನ ಉತ್ತಪ್ಪ ಅವರ ಪತ್ನಿ ರಾಧಾ (74) ಕೊಲೆಯಾದವರು. ಕೋಣೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳವಾಗಿವೆ.

ಮೃತರ ಅಳಿಯ ಹೊದವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ದಿನೇಶ್ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಡಿವೈಎಸ್‌ಪಿ ಸುಂದರ್ ರಾಜ್, ಮಡಿಕೇರಿ ಗ್ರಾಮಾಂತರ ಠಾಣೆಯ ಸಿಪಿಐ ಸಿದ್ದಯ್ಯ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಮೇಲ್ನೋಟಕ್ಕೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆರೋಪಿಗಳ ಪತ್ತೆಗೆ ಮಡಿಕೇರಿ ಅಪರಾಧ ದಳ, ನಾಪೋಕ್ಲು ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.

ಘಟನೆ ವಿವರ: ರಾಧಾ ಅವರಿಗೆ ಧನಪಾಲ್, ಜಾನ್ಸಿ ಮತ್ತು ನಂದಕುಮಾರ್ ಎಂಬ ಮೂವರು ಮಕ್ಕಳಿದ್ದಾರೆ. ಹಿರಿಯ ಮಗ ಧನಪಾಲ್ ಮೈಸೂರಿನಲ್ಲಿ ಕೆಲಸದ ನಿಮಿತ್ತ ವಾಸವಾಗಿದ್ದಾರೆ. ಜಾನ್ಸಿ ಅವರನ್ನು ಕುಲ್ಲಚಂಡ ದಿನೇಶ್ ಅವರಿಗೆ ವಿವಾಹ ಮಾಡಿಕೊಡಲಾಗಿದೆ. ಈ ದಂಪತಿ ಇವರ ಮನೆಯಿಂದ 2 ಕಿ.ಮೀ ದೂರದಲ್ಲಿ ವಾಸವಾಗಿದ್ದಾರೆ. ಮೂರನೇ ಮಗ ನಂದಕುಮಾರ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ರಾಧಾ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಶನಿವಾರ ಬೆಳಿಗ್ಗೆ ಮಗ ನಂದಕುಮಾರ್ ತಾಯಿಗೆ ಮೊಬೈಲ್ ಕರೆ ಮಾಡಿದಾಗ ಸ್ವೀಕರಿಸದ ಕಾರಣ ಪಕ್ಕದ ಮನೆ ಲೀಲಾವತಿ ಅವರಿಗೆ ಈ ಬಗ್ಗೆ ತಿಳಿಸಿದರು.

ಲೀಲಾವತಿ ಅವರು ಜಾನ್ಸಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಮನೆಗೆ ಬಂದ ಮಗಳು ಮುಂಬಾಗಿಲು ಮುಚ್ಚಿದ್ದು ಕಂಡು ಮನೆ ಹಿಂಬದಿಗೆ ಹೋಗಿ ನೋಡಿದಾಗ ಹಿಂಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯ ಮಂಚದ ಮೇಲೆ ರಾಧಾ ಮಲಗಿದ್ದು, ಮೂಗಿನಿಂದ ರಕ್ತ ಬರುತ್ತಿರುವುದು ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.