ADVERTISEMENT

ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ನಿಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:32 IST
Last Updated 1 ಏಪ್ರಿಲ್ 2019, 14:32 IST
ಜಮ್ಮಡ ಕರುಂಬಯ್ಯ
ಜಮ್ಮಡ ಕರುಂಬಯ್ಯ   

ಗೋಣಿಕೊಪ್ಪಲು: ರಾಜಕೀಯ ಮುತ್ಸದ್ಧಿ ಕೊಡಗು ಜಿಲ್ಲಾ ಪರಿಷತ್ ಪ್ರಥಮ ಅಧ್ಯಕ್ಷ ಜಮ್ಮಡ ಎ. ಕರುಂಬಯ್ಯ (84) ನಿಧನರಾದರು.

ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ವಯೋ ಸಾಮಾನ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕೈಕೇರಿ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಬೆಳಿಗ್ಗೆ 8.45ಕ್ಕೆ ನಿಧನ ಹೊಂದಿದರು. ಅಂತ್ಯಕ್ರಿಯೆ ಸೋಮವಾರ ಸಂಜೆ 3ರ ಸುಮಾರಿಗೆ ಜಮ್ಮಡ ಕುಟುಂಬದ ಸ್ಮಶಾನದಲ್ಲಿ ನೆರವೇರಿತು.

ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಎಂಎಲ್‌ಸಿಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಲೋಕಸಭಾ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಂಜುನಾಥ್, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ ಹಾಗೂ ಮುಖಂಡರು ಅಂತಿಮ ದರ್ಶನ ಪಡೆದರು.

ADVERTISEMENT

ನೇರ ನಡೆ–ನುಡಿಯ ರಾಜಕಾರಣಿ ಎಂದು ಹೆಸರು ಪಡೆದಿದ್ದ ಕರುಂಬಯ್ಯ ಅವರು, ಕೊಡಗು ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1987ರಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ಅಯ್ಕೆಯಾಗಿ, 1992ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾಗಿ ನಂತರ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದಲ್ಲಿದ್ದರು. ನಂತರ ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಮತ್ತೆ ಕಾಂಗ್ರೆಸ್‌ಗೆ ಸೇರಿದ್ದರು.

ಸಂತಾಪ ಸಭೆ: ಮೃತರ ಗೌರವಾರ್ಥ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಕರುಂಬಯ್ಯ ಅವರು ಪಕ್ಷಕ್ಕಾಗಿ ದುಡಿದ ಅವರ ಕಾರ್ಯವನ್ನು ಹಿರಿಯರು ನೆನಪಿಸಿಕೊಂಡರು.

ನಗರ ಘಟಕದ ಅಧ್ಯಕ್ಷ ಕುಲ್ಲಚಂಡ ಗಣಪತಿ, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಪ್ರಮುಖರಾದ ಬಿ.ಎನ್.ಪ್ರಕಾಶ್, ಅಜಿತ್ ಅಯ್ಯಪ್ಪ, ವಿನಯ್, ಟಿಪ್ಪು ಬಿದ್ದಪ್ಪ, ಎ.ಜೆ. ಬಾಬು, ಅರುಣ್ ಮಾಚಯ್ಯ, ಪಲ್ವಿನ್ ಪೂಣಚ್ಚ, ಕೊಲ್ಲೀರ ಬೋಪಣ್ಣ, ಲಾಲಾ ಅಪ್ಪಣ್ಣ, ವಿಶು, ಬಾನಂಡ ಪ್ರತ್ಯು, ಮಂಜುಳಾ ಇದ್ದರು.

ಗೋಣಿಕೊಪ್ಪ ಪಟ್ಟಣದಲ್ಲಿ 1 ಗಂಟೆ ಕಾಲ ಅಂಗಡಿ ಮುಚ್ಚಿ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.