ADVERTISEMENT

ಹೊರ ಜಿಲ್ಲೆಯವರಿಗೆ ಗುತ್ತಿಗೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 12:20 IST
Last Updated 22 ಜನವರಿ 2019, 12:20 IST

ಮಡಿಕೇರಿ: ಜಿಲ್ಲೆಯಲ್ಲಿ ಪಿಡಬ್ಲ್ಯೂಡಿ ವ್ಯಾಪ್ತಿಯ ರಸ್ತೆ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡಿರುವುದಕ್ಕೆ ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘವು ಆಕ್ಷೇ‍ಪ ವ್ಯಕ್ತಪಡಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ‘ಭಾರೀ ಮಳೆಯಿಂದ ರಸ್ತೆಗಳು ಹಾನಿಗೀಡಾಗಿದ್ದವು. ಆಗ ಸ್ಥಳೀಯ ಗುತ್ತಿಗೆದಾರರೇ ಪ್ರಾಣ ಭಯ ತೊರೆದು, ಸ್ವಂತ ಹಣ ವಿನಿಯೋಗಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದರು. ಆದರೆ, ಈಗ ಹೊರ ಜಿಲ್ಲಾ ಸಂಸ್ಥೆಗೆ ಗುತ್ತಿಗೆ ನೀಡುವುದಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದರು.

'ಉಸ್ತುವಾರಿ ಸಚಿವರು ತಮಗೆ ಬೇಕಾದ ಕೆ.ಆರ್.ನಗರದ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಾಕಷ್ಟು ವರ್ಷಗಳ ಹಿಂದೆ ಜಿಲ್ಲೆಯ ಗ್ರಾಮೀಣ ರಸ್ತೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಸ್ಥಳೀಯ ಗುತ್ತಿಗೆದಾರರಿಗೇ ಆದ್ಯತೆ ಮೇರೆಗೆ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

28ರಂದು ಪ್ರತಿಭಟನೆ: ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿರುವುದರ ವಿರುದ್ಧ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಜ. 28ರಿಂದ ಜಿಲ್ಲೆಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಚಂಗಪ್ಪ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟಿ.ಎಂ.ನಂಜಪ್ಪ, ಸಿ.ಎಸ್.ರಾಜೀವ್ ಬೋಪಯ್ಯ, ಎಂ.ಅರುಣ್ ಕುಮಾರ್, ಸಿ.ಯು.ಸುಬ್ಬಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.