ADVERTISEMENT

ವನ್ಯಜೀವಿಗಳ ಹಾವಳಿ: ಕಂಗಾಲಾದ ರೈತರು

ಕೊಡಗು ಜಿಲ್ಲೆ: ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚಾದ ಕಾಡಾನೆ ಹಾವಳಿ

ರೆಜಿತ್ ಕುಮಾರ್
Published 28 ಏಪ್ರಿಲ್ 2021, 6:24 IST
Last Updated 28 ಏಪ್ರಿಲ್ 2021, 6:24 IST
ಕಾಫಿ ತೋಟದಲ್ಲಿ ಕಾಡಾನೆ ಹಿಂಡು
ಕಾಫಿ ತೋಟದಲ್ಲಿ ಕಾಡಾನೆ ಹಿಂಡು   

ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಮಿತಿಮೀರಿದ್ದು, ರೈತರು, ಬೆಳೆಗಾರರು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಕಾಡಾನೆ, ಮಂಗಗಳು, ಕಾಡುಕೋಣ ಸೇರಿದಂತೆ ವನ್ಯಪ್ರಾಣಿಗಳು ನಾಡಿನತ್ತ ಲಗ್ಗೆ ಇಡುತ್ತಿದ್ದು, ರೈತರು ಬೆಳದ ಬೆಳೆಯನ್ನು ಹಾನಿಗೊಳಿಸುತ್ತಿದೆ. ಮತ್ತೊಂದೆಡೆ ವನ್ಯಪ್ರಾಣಿಗಳ ಹಾವಳಿಯಿಂದ ಕಾರ್ಮಿಕರ ಕೂಡ ಭಯದ ವಾತಾವರಣದಲ್ಲೇ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ.

ಕಾಡಾನೆ ಹಾವಳಿ:

ಜಿಲ್ಲೆಯ ವಿವಿಧ ಭಾಗದ ಪ್ರಮುಖ ಸಮಸ್ಯೆ ಕಾಡಾನೆ ಹಾವಳಿಯಾಗಿದ್ದು, ಸಿದ್ದಾಪುರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾಡಾನೆ ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವವರ ಸಂಖ್ಯೆ ಈ ಭಾಗದಲ್ಲಿ ಹೆಚ್ಚಾಗಿದ್ದು, ವರ್ಷವಿಡೀ ಕಾಡಾನೆ ಹಾವಳಿ ಮುಂದುವರಿದಿದೆ. ಸಿದ್ದಾಪುರದ ಬೀಟಿಕಾಡು, ಕರಡಿಗೋಡು, ಗುಹ್ಯ, ಅಮ್ಮತ್ತಿ, ಕಾರ್ಮಾಡು, ಹೊಸಕೋಟೆ, ಮಾಲ್ದಾರೆ, ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲ ಬಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.
ಅರಣ್ಯದಿಂದ ನಾಡಿಗೆ ಲಗ್ಗೆಯಿಡುವ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂದಲೆ ನಡೆಸುವುದಲ್ಲದೇ, ಮಾನವನ ಮೇಲೂ ದಾಳಿ ನಡೆಸುತ್ತಿದೆ. ಕಾಡಾನೆಗಳ ಹಿಂಡು ಒಂದ ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದು, ತೋಟದಲ್ಲಿ ಬೆಳೆದಿರುವ ಕಾಫಿ, ಹಲವು, ಮಾವು ಮುಂತಾದ ಹಣ್ಣುಗಳನ್ನು ತಿನ್ನುವುದಲ್ಲೇ, ಗಿಡಗಳನ್ನು ಕೂಡ ನಾಶ ಮಾಡುತ್ತಿದೆ. ಕರಡಿಗೋಡು ವ್ಯಾಪ್ತಿಯಲ್ಲಿ ಪ್ರತಿದಿನ ಕಾಡಾನೆಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಕಾಫಿ ಗಿಡಗಳು ಸೇರಿದಂತೆ ಗಿಡಗಳನ್ನು ಹಾನಿ ಮಾಡುತ್ತಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ.

ADVERTISEMENT

ಮರಳಿ ತೋಟಕ್ಕೆ ಆನೆಗಳು:

ಅರಣ್ಯ ಇಲಾಖೆಯ ಸಿಬ್ಬದಿ, ಕಾಡಾನೆ ಇರುವ ತೋಟದಿಂದ ಆನೆಗಳನ್ನು ಸಮೀಪದ ಅರಣ್ಯಕ್ಕೆ ಅಟ್ಟುತ್ತಿದ್ದು, ಕೆಲವೇ ದಿನಗಳಲ್ಲಿ ಕಾಡಾನೆಗಳು ಮರಳಿ ಕಾಫಿ ತೋಟಗಳಿಗೆ ಬರುತ್ತಿದೆ. ಕಾಫಿ ತೋಟದ ಹಲವು ಸೇರಿದಂತೆ ವಿವಿಧ ಹಣ್ಣುಗಳ ರುಚಿಯಿಂದ ಕಾಡಾನೆಗಳು ಮರಳಿ ತೋಟಗಳಿಗೆ ಬರುತ್ತಿದ್ದು, ಅರಣ್ಯ ಇಲಾಖೆ ನಿರ್ಮಿಸಿರುವ ಸೋಲಾರ್ ಬೇಲಿ, ಕಂದಕಗಳನ್ನು ದಾಟಿ ಕಾಡಾನೆಗಳು ಅರಣ್ಯದಿಂದ ಹೊರಬರುತ್ತಿದೆ. ಮಾನವನ ಮೇಲೆ ದಾಳಿ ನಡೆಸುತ್ತರುವ ಕಾಡಾನೆಗಳನ್ನು ಗುರುತಿಸಿ ಸೆರೆ ಹಿಡಿಯಲು ಅನುಮತಿಗಾಗಿ ಸರ್ಕಾರಕ್ಕೆ, ಇಲಾಖೆ ಪ್ರಸ್ತಾವ ಸಲ್ಲಿಸುತ್ತಿದ್ದು, ಅನುಮತಿ ವಿಳಂಬವಾಗುತ್ತಿದೆ. ಇತ್ತೀಚೆಗೆ ಪುಂಡಾಟಿಕೆ ಮಾಡುತ್ತಿದ್ದ ಕಾಡಾನೆಯನ್ನು ಅಮ್ಮತ್ತಿ ಸಮೀಪದ ಹೊಸತೋಟದಲ್ಲಿ ಸೆರೆ ಹಿಡಿದಿದ್ದರೂ, ಹೊಸತೋಟ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ಮಂಗಗಳ ಹಾವಳಿ:

ಸಿದ್ದಾಪುರ ಸಮೀಪದ ಕರಡಿಗೋಡು, ಮಾಲ್ದಾರೆ, ನೆಲ್ಯಹುದಿಕೇರಿ, ವಾಲ್ನೂರು- ತ್ಯಾಗತ್ತೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಮಿತಿಮೀರಿದೆ. ಕಾಫಿ ತೋಟಗಳಿಗೆ ಬರುವ ಮಂಗಗಳ ಗುಂಪು, ತೋಟದಲ್ಲಿ ಬೆಳೆದಿರುವ ಹಣ್ಣುಗಳು ಸೇರಿದಂತೆ ಕಾಫಿ ಬೀಜ, ಬೆಳೆಗಳು ಹಾಗೂ ಗಿಡಗಳನ್ನು ನಾಶ ಮಾಡುತ್ತಿದೆ.
ಕಾಫಿ ಹಣ್ಣಿನ ಸಮಯದಲ್ಲಿ ಗಿಡದಲ್ಲಿ ಬೆಳೆದಿರುವ ಕಾಫಿ ಹಣ್ಣನ್ನು ಕಿತ್ತು ತಿನ್ನುತ್ತಿದ್ದು, ಬೆಳೆಗಾರರು ಅಪಾರ ನಷ್ಟ ಅನುಭವಿಸುವಂತಾಗಿದೆ. ಮಂಗಗಳ ಹಾವಳಿಯನ್ನು ತಡೆಗಟ್ಟಲು ಬೆಳೆಗಾರರು ಹಾಗೂ ರೈತರು ಪಟಾಕಿ ಸಿಡಿಸುತ್ತಿದ್ದು, ಇತ್ತೀಚೆಗಿನ ದಿನಗಳಲ್ಲಿ ಪಟಾಕಿಯ ಶಬ್ದಕ್ಕೂ ಮಂಗಗಳು ಹೆದರುತ್ತಿಲ್ಲ. ಸಮೀಪದ ಅರಣ್ಯದಿಂದ ತೋಟದಿಂದ ತೋಟಗಳಿಗೆ ತೆರಳುವ ಮಂಗಗಳು ಹಲವು ತಿಂಗಳುಗಳ ಕಾಲ ಕಾಫಿ ತೋಟದಲ್ಲೇ ಇರುತ್ತಿದ್ದು, ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಇದಲ್ಲದೇ ಸಿದ್ದಾಪುರ ವ್ಯಾಪ್ತಿಯ ರಾಯಗೋಡು ತೋಟ, ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಭಯಬೀತರಾಗಿದ್ದರು.

ಕರಡಿಗೋಡು, ಬೀಟಿಕಾಡು ವ್ಯಾಪ್ತಿಯಲ್ಲಿ ಕಾಡುಕೋಣಗಳು ತೋಟಗಳಿಗೆ ಬರುತ್ತಿದ್ದು, ಕಾಡು ಹಂದಿ ಮುಂತಾದ ವನ್ಯಮೃಗಗಳಿಂದ ಬೆಳೆಗಾರರು ಬೆಳೆದ ಕೃಷಿ ಉತ್ಪನ್ನಗಳು ನಾಶವಾಗುತ್ತಿದೆ. ಮತ್ತೊಂದೆಡೆ ಕೂಲಿ ಕಾರ್ಮಿಕರು ಕೂಡ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಮಾಲ್ದಾರೆ, ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಹುಲಿ ದಾಳಿ ನಡೆಸಿ, ಜಾನುವಾರುಗಳನ್ನು ಕೊಂದು ಹಾಕಿತ್ತು. ಅರಣ್ಯ ಇಲಾಖೆ ಹುಲಿ ಸೆರೆಗೆ ಬೋನು ಅಳವಡಿಸಿದ್ದರೂ, ಹುಲಿ ಸೆರೆಯಾಗಲಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಹುಲಿ ಹಾವಳಿ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.