ADVERTISEMENT

ಮನೆ ನಿರ್ಮಾಣ ವಿಳಂಬ: ಹೋರಾಟದ ಎಚ್ಚರಿಕೆ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 16:12 IST
Last Updated 30 ಜನವರಿ 2019, 16:12 IST
ಜಂಬೂರಿನಲ್ಲಿ ಮನೆ ನಿರ್ಮಾಣ ಕಾಮಗಾರಿ
ಜಂಬೂರಿನಲ್ಲಿ ಮನೆ ನಿರ್ಮಾಣ ಕಾಮಗಾರಿ   

ಮಡಿಕೇರಿ: ‘ಕೊಡಗು ನೆರೆ ಸಂತ್ರಸ್ತರ ಪುನರ್ವಸತಿ ಕೆಲಸಗಳು ವಿಳಂಬವಾಗುತ್ತಿದ್ದು, ಸದನ ಒಳ ಹಾಗೂ ಹೊರಗೆ ಹೋರಾಟ ನಡೆಸುತ್ತೇವೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಎಚ್ಚರಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ಕಾರವು ಸಂಪೂರ್ಣ ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ. 840 ಮಂದಿಗೆ ಮಾತ್ರ ಮನೆ ನಿರ್ಮಿಸಿಕೊಡಲು ಸರ್ಕಾರ ಮುಂದಾಗಿದೆ. ವಾಸ್ತವದಲ್ಲಿ 3,849 ಮನೆಗಳಿಗೆ ಹಾನಿಯಾಗಿದ್ದು ಉಳಿದ ಸಂತ್ರಸ್ತರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

ಖಾದರ್‌ ವಿರುದ್ಧ ಆಕ್ರೋಶ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಒಂದು ತಿಂಗಳಲ್ಲಿ ಮನೆ ನಿರ್ಮಿಸುತ್ತೇವೆಂದು ಹೇಳಿದ್ದರು. ಅದೇ ರೀತಿ ಹಿಂದಿನ ವಸತಿ ಸಚಿವ ಯು.ಟಿ.ಖಾದರ್‌ ಅವರು ತಿಂಗಳಿಗೆ 50 ಮನೆ ನಿರ್ಮಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ, ಹತ್ತು ಮನೆಗಳ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇನ್ನೂ ತಳಪಾಯ ಸೇರಿದಂತೆ ವಿವಿಧ ಹಂತದ ಕಾಮಗಾರಿಗಳು ನಡೆಯುತ್ತಿವೆ. ಈಗಿನ ಪರಿಸ್ಥಿತಿ ನೋಡಿದರೆ ಮೇ ಅಂತ್ಯಕ್ಕೆ ಮನೆಯ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂದು ಹೇಳಿದರು.

ADVERTISEMENT

ಹೋರಾಟದ ಎಚ್ಚರಿಕೆ: ಮಳೆಗಾಲಕ್ಕೂ ಮುನ್ನ ಸಂತ್ರಸ್ತರಿಗೆ ಮನೆಗಳು ಸಿಗದಿದ್ದರೆ ದೊಡ್ಡಮಟ್ಟದ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

‘ಇನ್ಫೋಸಿಸ್ ಫೌಂಡೇಶನ್‌ ಹಾಗೂ ಸೇವಾ ಭಾರತಿ ಸಂಸ್ಥೆಯವರೂ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದರು. ಆದರೆ, ಸರ್ಕಾರ ಅವರಿಗೆ ಜಾಗವನ್ನೇ ನೀಡದೇ ನಿರ್ಲಕ್ಷ್ಯ ವಹಿಸಿ ದಾನಿಗಳನ್ನು ದೂರವಿಟ್ಟಿತ್ತು. ಸರ್ಕಾರದ ನಿರ್ಲಕ್ಷ್ಯ ಕಂಡುಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

₹231 ಕೋಟಿ: ‘ಮುಖ್ಯಮಂತ್ರಿ ಪರಿಹಾರ ನಿಧಿಗೆ 34 ಸಾವಿರ ಜನರು ₹131 ಕೋಟಿ ನೆರವು ನೀಡಿದ್ದರು. ಸರ್ಕಾರಿ ನೌಕರರು ₹ 100 ಕೋಟಿ ನೀಡಿದ್ದಾರೆ. ಸಿ.ಎಂ ಪರಿಹಾರ ನಿಧಿಯಲ್ಲಿ ಒಟ್ಟು ₹231 ಕೋಟಿ ಸಂಗ್ರಹವಾಗಿದೆ. ಇದು ಮುಖ್ಯಮಂತ್ರಿ ಕಚೇರಿಯಿಂದ ಪಡೆದ ಮಾಹಿತಿ’ ಎಂದು ಹೇಳಿದರು. 35 ಸಾವಿರ ರೈತರು ಬೆಳೆ ಕಳೆದುಕೊಂಡಿದ್ದರೂ ಇದುವರೆಗೂ 1,277 ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ ರೈತರಿಗೆ ಚಿಕ್ಕಾಸು ಬಿಡುಗಡೆ ಮಾಡಿಲ್ಲ ಎಂದು ದೂರಿದರು.

‘ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ ರಚನೆಯಾಗಿ ಇಷ್ಟು ದಿವಸ ಕಳೆದರೂ ಒಂದೇ ಒಂದು ಸಭೆಯೂ ನಡೆದಿಲ್ಲ. ವಿಶೇಷ ಜಿಲ್ಲಾಧಿಕಾರಿ ಆಗಿದ್ದ ಜಗದೀಶ್‌ ಅವರು ವರ್ಗಾವಣೆಗೊಂಡಿದ್ದರೂ ಅವರ ಸ್ಥಳಕ್ಕೆ ಬೇರೊಬ್ಬ ಅಧಿಕಾರಿ ಬಂದಿಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ‘ಸರ್ಕಾರವು ₹ 10 ಲಕ್ಷ ವೆಚ್ಚ ಮಾಡಿ ಮನೆ ನಿರ್ಮಿಸಲು ಮುಂದಾಗಿದೆ. ಅದರ ವಿಸ್ತೀರ್ಣ ಚಿಕ್ಕದಾಗಿದೆ. ಸುಸಜ್ಜಿತ, ಸೌಲಭ್ಯವಿರುವ ಮನೆಗಳನ್ನೇ ನಿರ್ಮಿಸಿಕೊಡಬೇಕು. ಉತ್ತಮ ಗುಣಮಟ್ಟದ ಮನೆಗಳನ್ನೇ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲೆಯ ಗುತ್ತಿಗೆದಾರರು ಮಳೆಗಾದಲ್ಲಿ ಜೀವದ ಹಂಗುತೊರೆದು ಕೆಲಸ ಮಾಡಿದ್ದಾರೆ. ಆದರೆ, ಈಗ ಕೆ.ಆರ್‌. ನಗರದ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ಇದರ ಹಿಂದಿನ ಗುಟ್ಟೇನು ಎಂದೂ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌, ವಿಧಾನ ಪರಿಷತ್ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.