ADVERTISEMENT

ದಂತದಿಂದ ಮಾವುತನ ತಿವಿದ ‘ಕಾರ್ತಿಕ್’

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 10:34 IST
Last Updated 13 ಜನವರಿ 2019, 10:34 IST
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದ ಸಾಕಾನೆ ‘ಕಾರ್ತಿಕ್’ 
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದ ಸಾಕಾನೆ ‘ಕಾರ್ತಿಕ್’    

ಕುಶಾಲನಗರ: ಕೊಡಗಿನ ಪ್ರವಾಸಿ ತಾಣ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಯೊಂದು ಭಾನುವಾರ ಮಾವುತನನ್ನೇ ದಂತದಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ್ದು ಮಾವುತನ ಸ್ಥಿತಿ ಗಂಭೀರವಾಗಿದೆ.

ಶಿಬಿರದ 9 ವರ್ಷದ ‘ಕಾರ್ತಿಕ್’ ಎಂಬ ಹೆಸರಿನ ಸಾಕಾನೆಯು ಮಾವುತ ನವೀನ್ ಅವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.ಬೆಳಿಗ್ಗೆ ಮೇವು ಕೊಡಲು ತೆರಳಿದಾಗ ಈ ಘಟನೆ ನಡೆದಿದೆ. ತಕ್ಷಣವೇ ನವೀನ್‌ ಅವರಿಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಶಿಬಿರದ ‘ವಿಜಯ’ ಎಂಬ ಹೆಣ್ಣಾನೆಯ ಪುತ್ರ ‘ಕಾರ್ತಿಕ್’. ಕಳೆದ ಏ.17ರಂದು ಮಾವುತ ಅಣ್ಣು ಅವರನ್ನೂ ಸಾಯಿಸಿತ್ತು. ಅದೇ ದಿನ ರಾತ್ರಿ ಚಂದ್ರು ಅವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಅಲ್ಲದೇ, ಮತ್ತೊಬ್ಬ ಮಾವುತ ಮಣಿ ಸಾವಿಗೂ ಈ ಸಾಕಾನೆ ಕಾರಣವಾಗಿತ್ತು. ಇದೀಗ ಮತ್ತೆ ಅದೇ ಆನೆಯು ಪುಂಡಾಟ ಆರಂಭಿಸಿದೆ.

ADVERTISEMENT

ಪುಂಡಾನೆಗಳನ್ನು ಪಳಗಿಸಿ ಶಿಸ್ತು ರೂಪಿಸುವ ವ್ಯವಸ್ಥೆ ಈ ಸಾಕಾನೆ ಶಿಬಿರದಲ್ಲಿದೆ. ಇಬ್ಬರು ಮಾವುತರನ್ನು ಸಾಯಿಸಿದ ಬಳಿಕ ‘ಕಾರ್ತಿಕ್‌’ನನ್ನು ಕ್ರಾಲ್‌ನಲ್ಲಿ ಬಂಧಿಸಿ ನಾಲ್ಕು ತಿಂಗಳ ನಂತರ ಬಿಡುಗಡೆ ಮಾಡಲಾಗಿತ್ತು. ಆನೆಯು ಮತ್ತೆಗಾಗಿ ಸಭ್ಯ ವರ್ತನೆ ತೋರಿತ್ತು. ಮತ್ತೆ ಹಳೆಯ ವರ್ತನೆ ಮುಂದುವರಿಸಿದೆ ಎಂದು ಸಿಬ್ಬಂದಿ ಹೇಳಿದರು.

ಪ್ರವಾಸಿಗರಿಗೆ ನಿರ್ಬಂಧ: ಆತಂಕದ ವಾತಾವರಣವಿದ್ದು ಪ್ರವಾಸಿಗರಿಗೆ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ದುಬಾರೆ ಅರಣ್ಯಾಧಿಕಾರಿ ರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಕೊಡಗು ಪ್ರವಾಸಿ ಉತ್ಸವ’ಕ್ಕೆ ಬಂದಿದ್ದ ಪ್ರವಾಸಿಗರು ಆನೆ ಶಿಬಿರ ವೀಕ್ಷಣೆಗೆ ಅವಕಾಶ ಸಿಗದೆ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.