ADVERTISEMENT

ಒಣಗಿದ ಬಳ್ಳಿ: ಕೃಷಿಕರ ಕಣ್ಣೀರು

ಶನಿವಾರಸಂತೆ: ಬತ್ತಿದ ಜಲಮೂಲಗಳು, ಗಡಿಭಾಗದಲ್ಲಿ ಅಕಾಲಿಕ ಮಳೆ ತಂದ ಸಂಕಟ

ಶ.ಗ.ನಯನತಾರಾ
Published 21 ಮಾರ್ಚ್ 2019, 11:55 IST
Last Updated 21 ಮಾರ್ಚ್ 2019, 11:55 IST
ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ತೋಟದಲ್ಲಿ ಒಣಗಿ ನಿಂತಿರುವ ಕಾಳುಮೆಣಸಿನ ಬಳ್ಳಿ
ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ತೋಟದಲ್ಲಿ ಒಣಗಿ ನಿಂತಿರುವ ಕಾಳುಮೆಣಸಿನ ಬಳ್ಳಿ   

ಶನಿವಾರಸಂತೆ: ‘ಕಳೆದ ವರ್ಷ ಆಗಸ್ಟ್‌ನಲ್ಲಿ ಉಂಟಾಗಿದ್ದ ಅತಿವೃಷ್ಟಿ ಪರಿಣಾಮ ಇದೀಗ ಕಾಳುಮೆಣಸಿನ ಬಳ್ಳಿ ಒಣಗಿ ನಿಂತು ಕೃಷಿಕ ಕಣ್ಣೀರಧಾರೆ ಸುರಿಸುವಂತಾಗಿದೆ. ಕೃಷಿಕರ ಜೀವನ ಸಂಕಷ್ಟದಲ್ಲಿ ಸಿಲುಕಿದೆ...’

– ಇದು ಅಪ್ಪಶೆಟ್ಟಳ್ಳಿ ಗ್ರಾಮದ ಎ.ಡಿ. ದೊಡ್ಡಪ್ಪ ಹಾಗೂ ಜಾನಕಿ ಕೃಷಿಕ ದಂಪತಿ ನೋವಿನ ನುಡಿ.

ಅತಿವೃಷ್ಟಿ, ಹವಾಮಾನದ ವೈಪರೀತ್ಯದಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಯಲ್ಲಿ ಶೀತ ಹೆಚ್ಚಾಗಿದ್ದು ಕಾಳುಮೆಣಸಿನ ಬಳ್ಳಿ ಒಣಗಿ ನಿಂತಿವೆ.

ADVERTISEMENT

ಇಳುವರಿ ಕಡಿಮೆಯಾಗಿ ದರ ಸಂಪೂರ್ಣ ಕುಸಿದಿದೆ. ಗಗನಕ್ಕೇರಿದ್ದ ದರ ಭೂಮಿಗಿಳಿದಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕಾಳುಮೆಣಸು 1 ಕೆ.ಜಿಗೆ ಇದ್ದ ದರ ₹ 600ರಿಂದ ₹ 800 ಇತ್ತು. ಆದರೆ, ಪ್ರಸ್ತುತ ದರ ಕೆ.ಜಿಗೆ ₹ ಬರೀ 260-270.

ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ.ದೊಡ್ಡಪ್ಪ ಅವರ 15 ಎಕರೆ ತೋಟದಲ್ಲಿ ನೂರಾರು ಮೆಣಸಿನ ಬಳ್ಳಿಗಳು ಒಣಗಿ ನಾಶವಾಗಿವೆ. 30 ಕ್ವಿಂಟಲ್ ಮೆಣಸು ಕೊಯ್ಯುತ್ತಿದ್ದವರಿಗೆ ಈ ಬಾರಿ ₹ 30 ಕೆ.ಜಿಯೂ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಬತ್ತಿದ ನದಿ: ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿ ಹಿನ್ನೀರು ಇದೀಗ ಬತ್ತಿ ಹೋಗಿದೆ. ಜೀವನಾಧಾರವಾಗಿದ್ದ ಕಾಳು ಮೆಣಸಿನ ಬಳ್ಳಿಯ ನಾಶಕ್ಕೆ ಕಾರಣವಾಗಿದೆ ಎಂಬುದು ರೈತರಾದ ಎ.ಡಿ.ಕುಮಾರಪ್ಪ, ಡಿ.ಪಿ. ಭೋಜಪ್ಪ, ಎ.ಎಂ. ರಾಜಪ್ಪ ಅಳಲು. ಈ ವ್ಯಾಪ್ತಿಯಲ್ಲಿ ಶೇ 80 ರೈತರು ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.

‘ಕಾಳು ಮೆಣಸಿನ ಬಳ್ಳಿ ನೆಟ್ಟು ಉತ್ತಮ ಫಸಲು ಕೊಡಲು 8-10 ವರ್ಷಗಳೇ ಬೇಕು. ನಷ್ಟ ಭರಿಸಲಾಗುವುದಿಲ್ಲ. ಹೊಸದಾಗಿ ಗಿಡ ನೆಡಬೇಕು. ಒಣಗಿ ಹೋದ ಗಿಡದ ಜಾಗದಲ್ಲೇ ಮತ್ತೆ ಗಿಡ ನೆಡುವಂತಿಲ್ಲ. ಮಣ್ಣನ್ನು ಶುದ್ಧೀಕರಣ ಮಾಡಿಯೇ ನೆಡಬೇಕು. ಖರ್ಚನ್ನು ಭರಿಸಲು ಸಾಧ್ಯವಿಲ್ಲ’ ಎಂಬುದು ದೊಡ್ಡಪ್ಪ ಅವರ ಅಳಲು.

ಕಾಳು ಮೆಣಸು ನಾಶ, ದರ ಕುಸಿತದಿಂದ ಚೇತರಿಸಿಕೊಳ್ಳದ ಕೃಷಿಕ ಇದೀಗ ಮಾರ್ಚ್‌ 1ರಂದು ಸುರಿದ ಅಕಾಲಿಕ ಮಳೆಗೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಅಂದು ಈ ವಿಭಾಗದಲ್ಲಿ ಸುರಿದ 10 ಸೆಂಟ್ ಮಳೆ ಕಾಫಿ ಮೊಗ್ಗಿನ ಮೇಲೆ ಪರಿಣಾಮ ಬೀರಿದೆ. 10 ದಿನಗಳೊಳಗೆ 2 ಇಂಚು ಮಳೆಯಾದರೂ ಬರಬೇಕಿತ್ತು. ಮೋಡದ ವಾತಾವರಣವಿದ್ದರೂ ನಿರೀಕ್ಷೆಯಂತೆ ಮಳೆಯಾಗಲಿಲ್ಲ.

ಇದರಿಂದ ಕಾಫಿ ಇಳುವರಿಯ ಮೇಲೆ ಹೊಡೆತ ಬೀಳಲಿದೆ. ತಿಂಗಳೊಳಗೆ ಮಳೆ ಬಾರದಿದ್ದರೇ ಬಿದ್ದ ಮಳೆಗೆ ಬಿರಿದ ಮೊಗ್ಗು ಉದುರಿಹೋಗುವ ಭಯ ಬೆಳೆಗಾರರನ್ನು ಕಾಡುತ್ತಿದೆ. ಫಸಲು ನಷ್ಟವಾಗುತ್ತದೆ. 1-2 ಇಂಚು ಮಳೆಯಾಗಿದ್ದರೇ ಒಳ್ಳೆಯದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಡಿಕೆ ಬೆಳೆಯ ಬಗ್ಗೆ ಒಲವು ತೋರಿದ್ದ ಅಪ್ಪಶೆಟ್ಟಳ್ಳಿ ಗ್ರಾಮದ ಕೆಲವು ರೈತರು ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಿದ್ದರು. ಅತಿವೃಷ್ಟಿಯ ಪರಿಣಾಮ ಶೀತ ಅಧಿಕವಾಗಿ ಬೆಳೆ ಉದುರಿಹೋಗಿವೆ. ಅಡಿಕೆ ಬೆಳೆಯೂ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.