ADVERTISEMENT

ಗಾಯಗೊಂಡ ಕಾಡಾನೆಗೆ ಚಿಕಿತ್ಸೆ

ಅರಣ್ಯ ಇಲಾಖೆ ಕಾರ್ಯಾಚರಣೆ

ಡಿ.ಪಿ.ಲೋಕೇಶ್
Published 4 ಏಪ್ರಿಲ್ 2019, 19:45 IST
Last Updated 4 ಏಪ್ರಿಲ್ 2019, 19:45 IST
ಸೋಮವಾರಪೇಟೆ ಬಾಣಾವರ ಮೀಸಲು ಅರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆಯನ್ನು ಸಾಕಾನೆಗಳು ನಿಯಂತ್ರಿಸಿ ಕರೆ ತರುತ್ತಿರುವುದು
ಸೋಮವಾರಪೇಟೆ ಬಾಣಾವರ ಮೀಸಲು ಅರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆಯನ್ನು ಸಾಕಾನೆಗಳು ನಿಯಂತ್ರಿಸಿ ಕರೆ ತರುತ್ತಿರುವುದು   

ಸೋಮವಾರಪೇಟೆ: ತಾಲ್ಲೂಕಿನ ಬಾಣಾವಾರ ಮೀಸಲು ಅರಣ್ಯದಲ್ಲಿ ಕಳೆದ ಕೆಲವು ದಿನಗಳಿಂದ ಗಾಯಗೊಂಡು ನರಳುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.

ಬಾಣಾವರ ಮೀಸಲು ಅರಣ್ಯದಲ್ಲಿ ಕಾಡಾನೆಯ ಎಡಗಾಲಿಗೆ ಗಾಯವಾಗಿ ರಕ್ತ ಸೋರುತ್ತಿತ್ತು. ಗಾಯಗೊಂಡು ಕುಂಟುತ್ತ ಸಂಚರಿಸುತ್ತಿರುವುದನ್ನು ಹಲವರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ವ್ಯಾಟ್ಸ್ ಆ್ಯಪ್ ನಲ್ಲಿ ತಮ್ಮ ಗೆಳೆಯರೊಂದಿಗೆ ಹಂಚಿಕೊಂಡಿದ್ದರು.

ಹದಿನೈದು ದಿನಗಳ ಹಿಂದೆ ಭುವಂಗಾಲ ಗ್ರಾಮದ ಕೆರೆಯೊಂದರಲ್ಲಿ ಗಾಯಗೊಂಡಿದ್ದ ಕಾಡಾನೆ ನೀರು ಕುಡಿಯುವಾಗ ಎಡಗಾಲಿನಿಂದ ರಕ್ತ ಸೋರುತ್ತಿರುವುದನ್ನು ಅರಣ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ADVERTISEMENT

ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳ ಆದೇಶದಂತೆ ಚಿಕಿತ್ಸೆ ನೀಡಲು ಇಲ್ಲಿನ ಸೋಮವಾರಪೇಟೆ ಅರಣ್ಯ ಇಲಾಖೆಯ ವತಿಯಿಂದ ತೀರ್ಮಾನಿಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಬುಧವಾರ ನಾಗರಹೊಳೆ ಅರಣ್ಯದ ಆನೆಗಳ ಕ್ಷಿಪ್ರ ಕಾರ್ಯಪಡೆ ತಂಡದ ಸಹಕಾರ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು ಮತ್ತು ಕೃಷ್ಣ, ದುಬಾರೆ ಅರಣ್ಯ ಕ್ಯಾಂಪ್ ನ ವಿಕ್ರಮ್ ಸೇರಿದಂತೆ ಮೂರು ಆನೆಗಳ ಸಹಕಾರದೊಂದಿಗೆ ಬೆಳಿಗ್ಗೆ 11.30ಕ್ಕೆ ಆನೆ ಹಿಡಿದು ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಿಸಿದರು. ಸಂಜೆ 4.30ರವರೆಗೆ ಮುಂದುವರಿಸಿದರು.

ನಾಗರಹೊಳೆಯ ಪಶು ವೈದ್ಯಾಧಿಕಾರಿ ಮುಜೀದ್ ಮತ್ತು ನಿರಂಜನ್ ಅವರು ಮುಂದಾಳತ್ವ ವಹಿಸಿದ್ದರು.

ಗಾಯಗೊಂಡಿದ್ದ ಆನೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವಾಗ ಅದು ಮೀಸಲು ಅರಣ್ಯದೊಳಗೆ ಮನಬಂದಂತೆ ಓಡಾಡಿದೆ. ಸಾಕಾನೆಗಳ ಸಹಕಾರದೊಂದಿಗೆ ಆನೆಯನ್ನು ಬೆನ್ನಟ್ಟಿದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅದರ ಕಾಲನ್ನು ಮರಕ್ಕೆ ಕಟ್ಟಿ ಗಾಯವನ್ನು ಶುಚಿಗೊಳಿಸಿ ಚಿಕಿತ್ಸೆ ನೀಡಿದರು. ಸ್ಥಳದಲ್ಲಿಯೇ ಬೀಡುಬಿಟ್ಟಿರುವ ವಲಯ ಅರಣ್ಯಾಧಿಕಾರಿ ಗುರುವಾರವೂ ಚಿಕಿತ್ಸೆ ಮುಂದುವರಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ ಮಾತನಾಡಿ, ‘ಸುಮಾರು 30 ವರ್ಷ ಪ್ರಾಯದ ಕಾಡಾನೆಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅದರ ಚಲನವಲನಗಳನ್ನು ವೀಕ್ಷಿಸಿ ಚಿಕಿತ್ಸೆ ಬೇಕಾದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್ ಮಾತನಾಡಿ, ಬುಧವಾರ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಿ, ನಿಡ್ತ ಮೀಸಲು ಅರಣ್ಯಕ್ಕೆ ತರಲಾಗಿದೆ. ಇಂದು ಸ್ವಲ್ಪ ಚೇತರಿಕೆ ಕಾಣುತ್ತಿದೆ. ಬೇಗ ವಾಸಿಯಾದಲ್ಲಿ ಅರಣ್ಯಕ್ಕೆ ಬಿಡಲಾಗುವುದು. ತಪ್ಪಿದಲ್ಲಿ ಆನೆ ಕ್ಯಾಂಪ್‌ಗೆ ಕರೆದೊಯ್ದು ಚಿಕಿತ್ಸೆ ಮುಂದುವರಿಸಲಾಗುವುದು ಎಂದರು.

ಕಾರ್ಯಾಚರಣೆಯಲ್ಲಿ ಇಲಾಖೆಯ ಮಾಧವ ನಾಯಕ್, ಶನಿವಾರಸಂತೆ, ಹುದುಗೂರು, ಬಾಣಾವಾರ, ನಾಗರಹೊಳೆ, ದುಬಾರೆಯ 30ಕ್ಕೂ ಹೆಚ್ಚಿನ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು. ಚಿಕತ್ಸೆ ನೀಡುವಾಗ ಜನ ಜಂಗುಳಿಯನ್ನು ಇಲ್ಲಿನ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿ ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.