ADVERTISEMENT

ಮಡಿಕೇರಿ ಜಿಲ್ಲೆಯಲ್ಲಿ ಸುಬ್ರಮಣ್ಯ ಷಷ್ಠಿ ಸಂಭ್ರಮ

ವಿವಿಧ ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 13:39 IST
Last Updated 13 ಡಿಸೆಂಬರ್ 2018, 13:39 IST
ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ಗುರುವಾರ ಸುಬ್ರಮಣ್ಯ ಷಷ್ಠಿ ಅಂಗವಾಗಿ ಕಂಡುಬಂದ ಭಕ್ತ ಸಮೂಹ 
ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ಗುರುವಾರ ಸುಬ್ರಮಣ್ಯ ಷಷ್ಠಿ ಅಂಗವಾಗಿ ಕಂಡುಬಂದ ಭಕ್ತ ಸಮೂಹ    

ಮಡಿಕೇರಿ: ಜಿಲ್ಲೆಯಾದ್ಯಂತ ಗುರುವಾರ ಸುಬ್ರಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿತ್ತು. ನಗರದ ಮುತ್ತಪ್ಪ ದೇವಾಲಯದ ಉತ್ಸವ ಸಮಿತಿ ವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ಜರುಗಿದವು. ಪೂಜೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ದೇಗುಲದ ಸುತ್ತ ತಳಿರು-ತೋರಣ, ಹೂವಿನೊಂದಿಗೆ ಶೃಂಗರಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಂತ ಭಕ್ತರು ವಿವಿಧ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ, ಪಂಚ ಕಜ್ಜಾಯ ಸೇವೆ, ಹಣ್ಣು ಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ನಡೆಯಿತು.

ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಆರಂಭಗೊಂಡಿತು. ವಯಸ್ಕರು, ಪುಟ್ಟ ಮಕ್ಕಳು ಹಾಗೂ ಮಹಿಳೆಯರು ಬಿಸಿಲಿನಲ್ಲೇ ಕಾದರು. ಸಂಜೆ ಭಜನಾ ಕಾರ್ಯಕ್ರಮ ಹಾಗೂ ಮಹಾಪೂಜೆಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.

ADVERTISEMENT

ಓಂಕಾರೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ, ಸಂಜೆ ತೆಪ್ಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ನಡೆದವು. ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಾಂಕರಿಸಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ಸರದಿಯಲ್ಲಿ ಕಾದು ಬಸವಳಿದಿದ್ದೂ ಕಂಡುಬಂತು.

ಚಂಪಾಷಷ್ಠಿ ಪ್ರಯುಕ್ತ ನಗರದ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ನಾಗ ದೇವರಿಗೆ ಅಭಿಷೇಕ ನಡೆಯಿತು. ಬೆಳಿಗ್ಗೆ 8ರಿಂದ 12ರ ವರೆಗೆ ಸೇವೆ ನಡೆಯಿತು. ಭಕ್ತರು ನಾಗರಪೂಜೆ ಮತ್ತು ಹುತ್ತಕ್ಕೆ ಹಾಲೆರೆದರು. ನಗರದ ಹಲವು ದೇವಸ್ಥಾನಗಳಲ್ಲಿ ಧ್ವನಿವರ್ಧಕ ಅಳವಡಿಸಿ ಭಕ್ತಿಗೀತೆಗಳನ್ನು ಪ್ರಸಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.