ADVERTISEMENT

‘ಬೆಳೆಗಾರರೇ ಮಾರಾಟಗಾರರಾದರೆ ಅನುಕೂಲ’

ಕೊಡಗು: ಪೊನ್ನಂಪೇಟೆಯಲ್ಲಿ ಬಿದಿರು ಸಂಪನ್ಮೂಲ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:11 IST
Last Updated 3 ಡಿಸೆಂಬರ್ 2020, 15:11 IST

ಮಡಿಕೇರಿ: ‘ಕೃಷಿ ಹೊಂಡದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಲಿದ್ದು, ಅದೇ ಕ್ರಮ ಅನುಸರಿಸಿ ಅರಣ್ಯ ಇಲಾಖೆ ಕಾಡಿನಲ್ಲಿ ಹೊಂಡ ನಿರ್ಮಿಸಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಇಲ್ಲಿ ಹೇಳಿದರು.

ಜಿಲ್ಲೆಯ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ರಾಷ್ಟ್ರೀಯ ಬಿದಿರು ಅಭಿಯಾನ ಆಶ್ರಯದಲ್ಲಿ ಬಿದಿರು ಸಂಪನ್ಮೂಲ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ರೈತರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಸಮಗ್ರ ಕೃಷಿ ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

ಕೃಷಿ, ತೋಟಗಾರಿಕೆ, ಅರಣ್ಯ, ಕಾರ್ಮಿಕ ಇಲಾಖೆ ಸಮನ್ವಯತೆ ಸಾಧಿಸಿ, ಉತ್ತಮವಾಗಿ ಕೆಲಸ ಮಾಡುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ರಾಷ್ಟ್ರಮಟ್ಟದ ಅರಣ್ಯ ಸಮೀಕ್ಷೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ರೈತರ ಆತ್ಮಹತ್ಯೆಗೆ ನೀರಾವರಿ ಸೌಲಭ್ಯ ಇಲ್ಲದೇ ಇರುವುದು ಮಾತ್ರ ಕಾರಣವಲ್ಲ. ಮಂಡ್ಯದಲ್ಲಿ ನೀರಾವರಿ ಸೌಲಭ್ಯವಿದ್ದರೂ ಹೆಚ್ಚು ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ನೀರಾವರಿ ಸೌಲಭ್ಯವಿಲ್ಲದ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣ ಕಡಿಮೆಯಿವೆ. ಯಾರೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಮನವಿ ಮಾಡಿದರು.

ಪ್ರತಿ ಜಿಲ್ಲೆಯಲ್ಲೂ ಸಮೀಕ್ಷೆ ನಡೆಸಿ ಸಮಗ್ರ ವರದಿ ತಯಾರಿಸಿ, ರೈತರ ಬದುಕು ಮುನ್ನೆಲೆಗೆ ತರಲು ಯೋಜನೆ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರೈತರು ಸ್ವತಃ ಮಾರಾಟಗಾರನಾಗಬೇಕು. ಕೃಷಿ ಸೊಸೈಟಿ ಮೂಲಕ ಮಾರಾಟ ಮಾಡುವ ಗುರಿ ಸರ್ಕಾರಕ್ಕಿದೆ ಎಂದರು.

ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಕೊಡಗು ಜನರ ಆತ್ಮವಿಶ್ವಾಸ ಹೆಮ್ಮೆ ತರಿಸುತ್ತದೆ. ಇಲ್ಲಿನ ಜನರು ಸಂಸ್ಕೃತಿ ಉಳಿಸುತ್ತಿರುವುದು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಬಳಸಿಕೊಂಡು ಕೃಷಿಕರು ಲಾಭ ಗಳಿಸಲು ಸಾಧ್ಯ. ಪರಂಪರೆ ಇರುವ ಬಿದಿರನ್ನು ಮರೆಯುವ ಕಾಲಘಟ್ಟದಲ್ಲಿ ಸರ್ಕಾರ ಬಿದಿರು ಬೆಳೆಯಲು ಉತ್ತೇಜನ ನೀಡುತ್ತಿದೆ. ಕೃಷಿಕರು ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ಇದರ ಹಿಂದೆ ಯಾವ ಮಾಫಿಯಾ ಕೆಲಸ ಮಾಡುತ್ತಿದೆ ಎಂದು ತಿಳಿದು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಾವುದೇ ಸರ್ಕಾರ ಬಂದರು ಕೃಷಿಕರ ಪರ ಇರಬೇಕು. ಈ ನಿಟ್ಟಿನಲ್ಲಿ ರೈತರ ಪರ ಕೇಂದ್ರ ಸರ್ಕಾರ‌ ಕೆಲಸ ಮಾಡುತ್ತಿದೆ ಎಂದರು.

ಕೊರೊನಾ ಸೋಂಕಿತರ ಸಂಖ್ಯೆ ಕ್ಷೀಣಿಸಿದೆಯೆಂದು ನಿರ್ಲಕ್ಷ್ಯ ತೋರಿಸಬೇಡಿ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಸುವಂತೆ ಸಲಹೆ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ರಕ್ಷಣೆಯೊಂದಿಗೆ ಜನರ ಪರ ಕೂಡ ಕೆಲಸ ಮಾಡಬೇಕು ಎಂದು ಆನಂದ್ ಸಿಂಗ್ ಹೇಳಿದರು.

ಹಾಡಿಯಲ್ಲಿ ನೆಲೆಸಿರುವ ಜನ ಕಾಡಿನ ರಕ್ಷಕರು. ಅವರ ಭಾವನೆಯನ್ನು ಅರ್ಥ ಮಾಡಿಕೊಂಡು ಜನಸ್ನೇಹಿಯಾಗಿ‌ ಕೆಲಸ ಮಾಡಬೇಕು. ಎಲ್ಲವನ್ನು ಕಾನೂನು ಚೌಕಟ್ಟಿನಲ್ಲಿ ನೋಡಬೇಡಿ ಎಂದು ಅಧಿಕಾರಿಗಳಿಗೆ ಸಭೆಯಲ್ಲೇ ಸೂಚನೆ ನೀಡಿದರು.

ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಗೆ ಯೋಜನೆ ರೂಪಿಸಲಾಗಿದೆ. ಆದರೆ, ಕೋವಿಡ್ 19 ಪರಿಸ್ಥಿತಿ ಹಿನ್ನೆಲೆ ಅನುಷ್ಠಾನಕ್ಕೆ ತರಲು ಅಸಾಧ್ಯವಾಗಿದೆ ಎಂದರು.

ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಸಿಮೀತವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ‌.ರಾಮಕೃಷ್ಣ ಹೆಗಡೆ ಮಾತನಾಡಿ, ಬಿದಿರು ಮಾನವ ಜೀವನ ಅವಿಭಾಜ್ಯ ಅಂಗವಾಗಿದೆ. ಹುಟ್ಟಿನಿಂದ ಸಾವಿನ ತನಕ ಬಿದಿರು ಬಳಕೆಯಾಗುತ್ತದೆ. ಕೈಗಾರಿಕೆ ಉತ್ಪನ್ನಕ್ಕೆ, ಕರಕುಶಲ, ಬಟ್ಟೆ, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಿದಿರು ಬಳಕೆಯಾಗುತ್ತಿದೆ‌. ರೈತರಿಗೆ ಆರ್ಥಿಕವಾಗಿ ಬಿದಿರು ಸಹಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿದಿರು ಸಂಪನ್ಮೂಲ ಕೇಂದ್ರ ಕೆಲಸ ಮಾಡುತ್ತದೆ. ಬಿದಿರು ಬೇಸಾಯಕ್ಕೆ ಪೂರಕವಾದ ತಂತ್ರಜ್ಞಾನಗಳನ್ನು ಪರಿಚಯಿಸಲಾಗುವುದು. ಜೊತೆಗೆ, ಬಿದಿರು ಸಂಸ್ಕರಣೆ ಮಾಡಿ ಮೌಲ್ಯವರ್ಧಿಸಲು ಸಹಾಯ ಮಾಡಲಾಗುತ್ತದೆ. ಕಾಲಕ್ಕೆ ಅನುಗುಣವಾಗಿ ಬಿದಿರು ಬೆಳೆಸುವ, ಬಳಸುವ ಕಾರ್ಯಾಗಾರ ನಡೆಸಲಾಗುತ್ತದೆ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಅವರು ಮಾತನಾಡಿ, ದೇಶದಲ್ಲಿ 295 ಮಿಲಿಯನ್ ಆಹಾರ ಬೆಳೆಯಲಾಗುತ್ತಿದೆ. 324 ಟನ್ ಮಿಲಿಯನ್ ತರಾಕಾರಿ ಬೆಳೆಯಲಾಗುತ್ತಿದೆ. ಹಾಲಿನ ಉತ್ಪದಾನೆಯಲ್ಲಿ ದೇಶ ಪ್ರಥಮ ಸ್ಥಾನದಲ್ಲಿದೆ, ಸಕ್ಕರೆ ಉತ್ಪಾದನೆ ಹೆಚ್ಚಳವಾಗಿದೆ. ಹೀಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದು ಅವರು ನುಡಿದರು.

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜಕುಮಾರ್ ಶ್ರೀವಾತ್ಸವ್, ಸಿಸಿಎಫ್‌ ಹೀರಲಾಲ್, ವಿರಾಜಪೇಟೆ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಮಡಿಕೇರಿ ಅರಣ್ಯಾಧಿಕಾರಿ ಪ್ರಭಾಕರ್, ಜಂಟಿ ಕೃಷಿ ನಿರ್ದೇಶಕಿ ಶಭಾನಾ ಇದ್ದರು.

ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಡಾ.ಕುಶಾಲಪ್ಪ ಸ್ವಾಗತಿಸಿದರು. ಡಾ.ಜಿ.ಎಂ.ದೇವಗಿರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.