ADVERTISEMENT

ಕೊಡಗು: ಜ್ವರ ತಪಾಸಣೆಗೆ ಪ್ರತ್ಯೇಕ ಘಟಕ ಆರಂಭ

ಸಾರ್ವಜನಿಕ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 14:32 IST
Last Updated 26 ಮಾರ್ಚ್ 2020, 14:32 IST
ವಿರಾಜಪೇಟೆ ಪಟ್ಟಣದಲ್ಲಿ ನಿರ್ಬಂಧ ಸಡಲಿಕೆಯ ಅವಧಿಯಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಂ ಆಗಿ ಸಮಸ್ಯೆ ಎದುರಿಸುವಂತಾಯಿತು
ವಿರಾಜಪೇಟೆ ಪಟ್ಟಣದಲ್ಲಿ ನಿರ್ಬಂಧ ಸಡಲಿಕೆಯ ಅವಧಿಯಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಂ ಆಗಿ ಸಮಸ್ಯೆ ಎದುರಿಸುವಂತಾಯಿತು   

ವಿರಾಜಪೇಟೆ: ಗುರುವಾರ ನಿರ್ಬಂಧ ಸಡಿಲಿಸಿದ ಅವಧಿಯನ್ನು ಹೊರತುಪಡಿಸಿದಂತೆ ಉಳಿದ ಅವಧಿಯಲ್ಲಿ ಪಟ್ಟಣ ಸಂಪೂರ್ಣ ಲಾಕ್‌ಡೌನ್ ಆಗಿತ್ತು.

ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಿಗ್ಗೆ 6 ರಿಂದ ಅಪರಾಹ್ನ 12ರವರೆಗೆ ನಿರ್ಬಂಧ ಸಡಿಲಿಸಿದ್ದರಿಂದ ಬಹುತೇಕ ವ್ಯಾಪಾರಿಗಳು ಬೆಳಿಗ್ಗೆ 6ಕ್ಕೆ ಅಂಗಡಿಗಳನ್ನು ತೆರೆದಿದ್ದರು. ಇದರಿಂದಾಗಿ ಬೆಳಿಗ್ಗೆ 6 ರಿಂದಲೇ ನಗರ ಹಾಗೂ ಸುತ್ತಮುತ್ತಲಿನ ಗ್ರಾಮದವರು ಅಗತ್ಯ ವಸ್ತುಗಳ ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದು ಕಂಡು ಬಂತು.

ಬೆಳಿಗ್ಗೆ ಸುಮಾರು 8ರ ಸಮಯಕ್ಕೆ ಸಾಕಷ್ಟು ಅಂಗಡಿಗಳಲ್ಲಿ ಗ್ರಾಹಕರ ದಟ್ಟಣೆ ಸಾಕಷ್ಟು ಹೆಚ್ಚಾಗಿತ್ತು. ಕೆಲಕಾಲ ವಾಹನ ದಟ್ಟಣೆ ಹೆಚ್ಚಾದ್ದರಿಂದ ಟ್ರಾಫಿಕ್ ಜಾಂ ಕೂಡ ಉಂಟಾಗಿ ಪೊಲೀಸರು ಪರದಾಡುವಂತಾಯಿತು.

ADVERTISEMENT

ಪಟ್ಟಣದ ಕೆಲವು ಔಷಧ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳ ಮುಂಭಾಗದಲ್ಲಿ ಸಾಮಾಜಿಕ ಅಂತರವನನು ಕಾಯ್ದುಕೊಳ್ಳುವ ಉದ್ದೇಶದಿಂದ ಗೆರೆಗಳನ್ನು ಎಳೆಯಲಾಗಿತ್ತು. ಇದನ್ನು ಅನುಸರಿಸಿ ಗ್ರಾಹಕರು ಖರೀದಿಯನ್ನು ನಡೆಸುತ್ತಿದ್ದರು.

ತರಕಾರಿಯ ಬೆಲೆ ಗಗನಕ್ಕೇರಿರಿದ್ದು, ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ತರಕಾರಿ ಮಾರಾಟವನ್ನು ಮಾಡಿದರು, ಈ ನಡೆಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ಮಧ್ಯಾಹ್ನ 12ಕ್ಕೆ ಸಾರ್ವಜನಿಕರಿಗೆ ಮನೆಗೆ ಹಿಂದಿರುಗಲು ಪಟ್ಟಣ ಪಂಚಾಯಿತಿಯ ಸೈರನ್ ಮೊಳಗಿಸಲಾಯಿತು. ಪೊಲೀಸರು ಎಲ್ಲರನ್ನು ಒತ್ತಾಯದಿಂದ ಚದುರಿಸಿ ಮನೆಗೆ ಹೋಗುವಂತೆ ಕಳುಹಿಸುತ್ತಿರುವುದು ಕಂಡು ಬಂತು.

ಪ್ರತ್ಯೇಕ ಘಟಕ ಆರಂಭ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಜ್ವರದ ರೋಗಿಗಳಿಗಾಗಿ ತಪಾಸಣೆಯ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ. ಬೆಳಗಿನಿಂದ ಅಪರಾಹ್ನ 1ರವರೆಗೆ ತನಕ ಒಟ್ಟು 148 ಮಂದಿ ಈ ಘಟಕದಲ್ಲಿ ಜ್ವರ ತಪಾಸಣೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸ್ವಯಂ ಘೋಷಣೆ ಮಾಡಿಕೊಂಡಿರುವ ವಿದೇಶಿಯರ ಸಂಖ್ಯೆ 39ಕ್ಕೆ ಏರಿದೆ. ಎಲ್ಲರೂ 15 ದಿನಗಳ ತನಕ ನಿಗಾ ಘಟಕದಲ್ಲಿರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.

39 ಮಂದಿ ಪೈಕಿ ಯಾರಿಗೂ ಕೊರೊನಾ ಸೋಂಕು ತಗಲಿರುವಂತೆ ಕಂಡು ಬಂದಿಲ್ಲ ಎಂದರು. ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದರು.

ಸರ್ಕಾರದ ಲಾಕ್ ಡೌನ್ ಆದೇಶದಂತೆ ವಿರಾಜಪೇಟೆಯಲ್ಲಿ ಜನ ಸಂಚಾರವನ್ನು ನಿಯಂತ್ರಿಸಿ ಮನೆಯಲ್ಲಿಯೇ ಇರುವಂತೆ ಪೊಲೀಸ್ ಸಿಬ್ಬಂದಿ ಸೂಚನೆ ನೀಡಿ ಕಳಿಸುತ್ತಿದ್ದಾರೆ.

ಈ ಕುರಿತು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಊಟ, ಉಪಹಾರಕ್ಕಾಗಿ ಪಟ್ಟಣದ ಸಮುಚ್ಚಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕ್ಯಾಂಟೀನ್ನ್ನು ಆರಂಭಿಸಲಾಗಿದೆ.

ಪ್ರತಿದಿನ 50ರಿಂದ 60 ಮಂದಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟೀನ್‌ನಿಂದ ಆಹಾರ ಸರಬರಾಜು ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಿ ಪೊಲೀಸ್ ಸಿಬ್ಬಂದಿಗಳೇ ಆಹಾರ ತಯಾರಿಸುತ್ತಿದ್ದಾರೆ ಎಂದು ಡಿವೈಎಸ್ಪಿ ಸಿ.ಟಿ.ಜಯಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.