ADVERTISEMENT

ಏಪ್ರಿಲ್‌ನಲ್ಲಿ ಪೊನ್ನಂಪೇಟೆ ತಾಲೂಕು ಉದ್ಘಾಟನೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:42 IST
Last Updated 14 ಮಾರ್ಚ್ 2020, 13:42 IST
ಸಭೆಯಲ್ಲಿ ಭಾಗವಹಿಸಿದ್ದ ಹೋರಾಟ ಸಮಿತಿ ಸದಸ್ಯರು
ಸಭೆಯಲ್ಲಿ ಭಾಗವಹಿಸಿದ್ದ ಹೋರಾಟ ಸಮಿತಿ ಸದಸ್ಯರು   

ಪೊನ್ನಂಪೇಟೆ: ಪೊನ್ನಂಪೇಟೆ ತಾಲ್ಲೂಕು ಉದ್ಘಾಟನೆ ಎಪ್ರಿಲ್ ತಿಂಗಳಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ನೆರವೇರಿಸುವ ನಿರ್ಧಾರವನ್ನು ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಹೋರಾಟ ಸಮಿತಿ ಹಾಗೂ ನಾಗರಿಕ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕ್ರಮಕ್ಕೆ ₹4 ಲಕ್ಷ ಅಂದಾಜು ವೆಚ್ಚವಾಗಲಿದ್ದು, ಕಚೇರಿ ನಿರ್ಮಾಣಕ್ಕೆ ಹಾಗೂ ಪೀಠೋಪಕರಣಗಳ ಖರೀದಿಗೆ ₹25 ಲಕ್ಷ ಬಿಡುಗಡೆಯಾಗಿದಗದು, ಆ ಹಣ ಬಳಸಿಕೊಂಡು ಕೈಗೊಳ್ಳಬೇಕಾದ ಯೋಜನೆಯ ಬಗ್ಗೆ ಚರ್ಚಿಸಲಾಯಿತು.

ಆಹಾರ ನಿಗಮದ ಕಟ್ಟಡದಲ್ಲಿ ಕಚೇರಿ ನಡೆಸುವಂತೆ ಈ ಹಿಂದೆ ನಿರ್ಧರಿಸಿದಂತೆ ತಾಲ್ಲೂಕು ಕಚೇರಿಗೆ ಹೋರಾಟ ಸಮಿತಿ ಕಾಳಜಿವಹಿಸಿ ವಿದ್ಯುತ್ ದೀಪ ಅಳವಡಿಸಿರುವ ಕುರಿತು ಮಾಹಿತಿ ನೀಡಲಾಯಿತು.

ADVERTISEMENT

ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ಎಂ. ರವೀಂದ್ರ ಮಾತನಾಡಿ, ಎಪ್ರಿಲ್ ತಿಂಗಳಿನಲ್ಲಿ ಉದ್ಘಾಟನೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿ ಜತೆ ಚರ್ಚಿಸಿರುವುದಾಗಿ ಮಾಹಿತಿ ನೀಡಿದರು.

ಕಾರ್ಯಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಪ್ರತ್ಯೇಕ ತಾಲೂಕು ಹೋರಾಟ ಆರಂಭಗೊಂಡ ನಂತರ ನೂತನ ತಾಲ್ಲೂಕಿಗೆ ಒಳಪಡುವ 21 ಗ್ರಾಮ ಪಂಚಾಯತಿಯಲ್ಲಿ ತಾಲೂಕು ಬೇಕು ಎಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿರುವುದರಿಂದ ಅಧಿಕೃತವಾಗಿ ಪ್ರತ್ಯೇಕ ತಾಲೂಕು ಘೋಷಣೆಯಾಗಲು ಕಾರಣವಾಯಿತು ಎಂದರು.

ಹೋರಾಟ ಸಮಿತಿಯ ನಾಯಕಿ ಪದ್ಮಿನಿ ಪೊನ್ನಪ್ಪ ಮಾತನಾಡಿ, ತಾಲ್ಲೂಕು ಹೋರಾಟಕ್ಕೆ ಸ್ವಂದಿಸಿ ತಾಲೂಕು ಘೋಷಣೆಯಾಗಲು ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಅವರ ಪಾತ್ರ ಹೆಚ್ಚಿದೆ. ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ಕರೆದು ವಿಶೇಷವಾಗಿ ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.

ನಾಗರಿಕ ಸಮಿತಿಯ ಕಾರ್ಯದರ್ಶಿಯಾಗಿದ್ದ ಎಂ.ಎ ಅಪ್ಪಯ್ಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ನಾಗರಿಕ ಸಮಿತಿ ಅಧ್ಯಕ್ಷ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಹೋರಾಟ ಸಮಿತಿ ಸಲಹೆಗಾರ ಮತ್ರಂಡ ಅಪ್ಪಚ್ಚು, ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸಿ. ಕೆ. ಪೊನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.