ADVERTISEMENT

ವಿರಾಜಪೇಟೆ: ಪಾದಚಾರಿ, ನಿನಗೆಲ್ಲಿದೆ ದಾರಿ?

ವಿರಾಜಪೇಟೆಯಲ್ಲಿ ಅಪಾಯದಲ್ಲಿದೆ ರಸ್ತೆಯಲ್ಲಿ ನಡೆದಾಡುವವರ ಜೀವ

ಪ್ರಜಾವಾಣಿ ವಿಶೇಷ
Published 19 ಜುಲೈ 2023, 4:50 IST
Last Updated 19 ಜುಲೈ 2023, 4:50 IST
ರಸ್ತೆಯಲ್ಲೆ ಸಾಗುತ್ತಿರುವ ವಿದ್ಯಾರ್ಥಿಗಳು
ರಸ್ತೆಯಲ್ಲೆ ಸಾಗುತ್ತಿರುವ ವಿದ್ಯಾರ್ಥಿಗಳು   

ಹೇಮಂತ್ ಎಂ.ಎನ್.

ವಿರಾಜಪೇಟೆ: ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಪಾದಚಾರಿಗಳು ಅಂಗೈನಲ್ಲಿ ಪ್ರಾಣ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಎಲ್ಲ ರಸ್ತೆಗಳೂ ಕಿಷ್ಕಿಂದೆಯಂತಾಗಿದ್ದು, ನಡೆಯುವವರ ಗೋಳು ಹೇಳತೀರದಾಗಿದೆ.

ಪಟ್ಟಣದ ಮೂರ್ನಾಡು ರಸ್ತೆಯ ಜಂಕ್ಷನ್‌ನಿಂದ ಚಿಕ್ಕಪೇಟೆಯ ಛತ್ರಕೆರೆಯವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಪಾದಚಾರಿಗಳಿಗೆ ನಡೆಯಲು ಸೂಕ್ತವಾದ ಸ್ಥಳಾವಕಾಶ ಇಲ್ಲದಿರುವುದರಿಂದ ಜನರು ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ನಡೆಯಬೇಕಿದೆ.

ADVERTISEMENT

ಮೂರ್ನಾಡು ರಸ್ತೆಯ ಜಂಕ್ಷನ್ನಿಂದ ಸೆಸ್ಕ್, ಬಿ.ಎಸ್.ಎನ್.ಎಲ್ ಕಚೇರಿಯವರೆಗೆ ಬಹುತೇಕ ದಿನ ರಸ್ತೆಯ ಇಕ್ಕೆಲಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳು ಪಾದಚಾರಿ ಮಾರ್ಗವನ್ನು ನುಂಗಿ ನಿಲ್ಲುತ್ತಿವೆ. ಅಲ್ಲಿಂದ ಮಠದ ಗದ್ದೆಯ ತಿರುವಿನವರೆಗೆ ಪಾದಚಾರಿಗಳಿಗೆ ನಡೆಯಲು ಬಹುತೇಕ ಕಡೆ ರಸ್ತೆಯ ಬದಿಯಲ್ಲಿ ಜಾಗವೇ ಇಲ್ಲ. ಕೆಲವೆಡೆ ಗಿಡಗಂಟಿಗಳು ಬೆಳೆದಿದ್ದರೆ, ಕೆಲವೆಡೆ ಚರಂಡಿ ಪಾದಚಾರಿ ಮಾರ್ಗವನ್ನು ಕಬಳಿಸಿವೆ, ಇನ್ನು ಕೆಲವೆಡೆ ಹಳ್ಳದಿಣ್ಣೆಗಳಿಂದಾಗಿ ಪಾದಚಾರಿ ಮಾರ್ಗವೇ ಇಲ್ಲ.

ಮಠದ ಗದ್ದೆಯ ತಿರುವಿನಿಂದ ಛತ್ರಕೆರೆಯವರೆಗೆ ರಸ್ತೆ ಬದಿ ವಿಶಾಲವಾಗಿಯೇನೋ ಇವೆ. ಆದರೆ, ಚರಂಡಿ ಹಾಗೂ ಮಳೆನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ಮಳೆಯ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತು ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಇದರೊಂದಿಗೆ ಕೆಲ ದಿನಗಳು ರಸ್ತೆಯ ಬದಿಯುದ್ದಕ್ಕು ಸಾಲಾಗಿ ನಿಲುಗಡೆಗೊಳಿಸಿರುವ ಲಾರಿ ಸೇರಿದಂತೆ ಸರಕು ಸಾಗಾಣಿಕ ವಾಹನಗಳನ್ನು ಪಾದಚಾರಿಗಳನ್ನು ರಸ್ತೆಯಲ್ಲೆ ಸಂಚರಿಸುವಂತೆ ಮಾಡುತ್ತಿವೆ.

ಪಟ್ಟಣದ ಬಹುತೇಕ ಶಾಲಾ-ಕಾಲೇಜುಗಳಿರುವುದು ಈ ಭಾಗದಲ್ಲೆ. ಮುಖ್ಯವಾಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಜೆ.ಪಿ.ಎನ್ ಪ್ರೌಢಶಾಲೆ, ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳು, ಜತೆಗೆ ಛತ್ರಕೆರೆಯ ಸಮೀಪದಲ್ಲೆ ಬಿ.ಸಿ.ಎಂ ಬಾಲಕಿಯರ ಹಾಗೂ ಬಾಲಕರ ಹಾಸ್ಟೆಲ್‌ಗಳು ಕೂಡ ಇವೆ. ಇದರಿಂದ ಪಟ್ಟಣದ ಬಹುತೇಕ ವಿದ್ಯಾರ್ಥಿಗಳು ನಿತ್ಯ ಇದೇ ರಸ್ತೆಯಲ್ಲೆ ಶಾಲಾ-ಕಾಲೇಜುಗಳಿಗೆ ತೆರಳಬೇಕು.

ಪಾದಚಾರಿ ಮಾರ್ಗಗಳು ಸೂಕ್ತವಾಗಿಲ್ಲದ್ದರಿಂದ ಪುಟಾಣಿಗಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ಇದೇ ರಸ್ತೆಯಲ್ಲಿ ಜೀವಭಯದಲ್ಲೆ ನಡೆದಾವಂತಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ವಿರಾಜಪೇಟೆ-ಮಡಿಕೇರಿ ಹೆದ್ದಾರಿಯು ತಿರುವುಗಳಿಂದ ಮೊದಲೇ ಅಪಾಯಕಾರಿಯಾಗಿದ್ದು, ಜತೆಗೆ ವೇಗದ ಚಾಲನೆಯಿಂದಾಗಿ ಅಪಾಯ ಹೆಚ್ಚಾಗಿದೆ.

ಸಮಸ್ಯೆ ಹಳೆಯದಾದರೂ, ಲೋಕೋಪಯೋಗಿ ಹಾಗೂ ಪುರಸಭೆಯು ಇತ್ತ ಗಮನಹರಿಸಿದರೆ ಒಂದೆರಡು ದಿನಗಳಲ್ಲೆ ಬಹುತೇಕ ಸಮಸ್ಯೆಯನ್ನು ಪರಿಹರಿಸಬಹುದು. ಅಗತ್ಯವಿರುವೆಡೆಗಳಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯನ್ನು ಸಮತಟ್ಟುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಂಡರೆ ಬಹುತೇಕ ಸಮಸ್ಯೆ ಪರಿಹಾರವಾದಂತೆ ಸರಿ. ಇದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಬಹುದು ಎಂಬುದು ನಾಗರಿಕರ ಅಭಿಪ್ರಾಯ.

ಮೂರ್ನಾಡು ರಸ್ತೆಯ ಜಂಕ್ಷನ್ ಬಳಿ ನಡು ರಸ್ತೆಯಲ್ಲಿ ಸಾಗುತ್ತಿರುವ ವಿದ್ಯಾರ್ಥಿಗಳು
ಸೆಸ್ಕ್ ಹಾಗೂ ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸಿರುವುದು
ಮಠದ ಗದ್ದೆಯ ಬಳಿ ಭಾರಿ ವಾಹನಗಳು ನಿಲುಗಡೆಗೊಳಿಸಿರುವುದು 
ಪಾದಚಾರಿ ಮಾರ್ಗವನ್ನು ಗಿಡಗಂಟಿಗಳು ಆಕ್ರಮಿಸಿರುವುದು
ಪಾದಚಾರಿ ಮಾರ್ಗವನ್ನು ಗಿಡಗಂಟಿಗಳು ಆಕ್ರಮಿಸಿರುವುದು
ಚಂದ್ರ ಕುಮಾರ್: ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ:
ಮಾಳೇಟಿರ ಬೋಪಣ್ಣ ಚಿಕ್ಕಪೇಟೆ ನಿವಾಸಿ:
ಪಿ.ಎ.ಮಂಜುನಾಥ್ ವಿದ್ಯಾರ್ಥಿಯ ಪೋಷಕರು

ಹಲವೆಡೆ ಪಾದಚಾರಿ ಮಾರ್ಗಗಳನ್ನು ಕಬಲಿಸಿರುವ ವಾಹನಗಳು ಇನ್ನೂ ಕೆಲವೆಡೆ ಪಾದಚಾರಿ ಮಾರ್ಗವೇ ಇಲ್ಲ ರಸ್ತೆಯಲ್ಲಿ ವಾಹನಗಳೊಂದಿಗೆ ಸಾಗುವ ಪಾದಚಾರಿಗಳು

ಜೆ.ಸಿ.ಬಿ ಯಂತ್ರವನ್ನು ಬಳಸಿ ಒಂದೆರಡು ದಿನಗಳಲ್ಲಿ ಸಾಧ್ಯವಿರುವೆಡೆಗಳಲ್ಲಿ ಪಾದಚಾರಿ ಮಾರ್ಗವನ್ನು ಸರಿಪಡಿಸಲಾಗುವುದು. ಜತೆಗೆ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುವುದು.

-ಚಂದ್ರ ಕುಮಾರ್: ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ:

ರಸ್ತೆ ಬದಿಯಲ್ಲಿ ಭಾರಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನಹರಿಸಿದರೆ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಬಹುದು

-ಮಾಳೇಟಿರ ಬೋಪಣ್ಣ ಚಿಕ್ಕಪೇಟೆ ನಿವಾಸಿ:

ನೂರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ನಿತ್ಯ ಜೀವಕೈಯಲ್ಲಿಡಿದುಕೊಂಡೇ ಶಾಲಾ-ಕಾಲೇಜುಗಳಿಗೆ ಹೋಗಬೇಕಿದೆ. ಈಗಿನ ಶಾಸಕರು ಅಪಾಯ ಸಂಭವಿಸುವ ಮೊದಲು ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಬೇಕು.

-ಪಿ.ಎ.ಮಂಜುನಾಥ್ ವಿದ್ಯಾರ್ಥಿಯ ಪೋಷಕರು :

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.