ADVERTISEMENT

ಕೊಡಗಿನಲ್ಲಿ ಸಾಧಾರಣ ಮಳೆ: ಬೆಳೆಗಾರರಿಗೆ ನಿರಾಸೆ ತಂದ ಹೂಮಳೆ

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 19:45 IST
Last Updated 29 ಫೆಬ್ರುವರಿ 2020, 19:45 IST
ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಶನಿವಾರ ಮುಂಜಾನೆ ಸುರಿದ ಮಳೆಗೆ ಒದ್ದೆಯಾದ ಕಾಫಿ
ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಶನಿವಾರ ಮುಂಜಾನೆ ಸುರಿದ ಮಳೆಗೆ ಒದ್ದೆಯಾದ ಕಾಫಿ   

ನಾಪೋಕ್ಲು: ಶನಿವಾರ ಮುಂಜಾನೆ ನಾಪೋಕ್ಲು ವ್ಯಾಪ್ತಿಯ ವಿವಿಧೆಡೆ ಮಳೆಯಾಗಿದೆ. ಬೆಳಿಗ್ಗೆ 4.15 ರಿಂದ ಆರಂಭಗೊಂಡ ತುಂತುರು ಮಳೆ ಅರ್ಧ ಗಂಟೆಗಳ ಕಾಲ ಸುರಿಯಿತು. ಅಂದಾಜಿನ ಪ್ರಕಾರ, ಪಟ್ಟಣದಲ್ಲಿ 5 ಮಿ.ಮೀ ಮಳೆಯಾಗಿದೆ.

ಮಳೆಯಿಂದಾಗಿ ಕೆಲವು ಬೆಳೆಗಾರರು ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಒದ್ದೆಯಾಗಿದೆ. ಕಾರ್ಮಿಕರ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಕಾಫಿ ಕೊಯ್ಲು ಇನ್ನೂ ಮುಕ್ತಾಯದ ಹಂತದಲ್ಲಿದೆ. ಶನಿವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತಾದರೂ ಮಳೆಯಾಗಿಲ್ಲ. ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರಿಗೆ ನಿರಾಸೆಯಾಗಿದೆ.

ನಾಪೋಕ್ಲು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಬೆಳೆಗಾರರು ತುಂತುರು ನೀರಾವರಿ ಮೂಲಕ ತೋಟಗಳಿಗೆ ನೀರು ಪೂರೈಸಿದ್ದು, ಕಾಫಿಯ ಹೂಗಳು ಅರಳಿ ಘಮಘಮಿಸುತ್ತಿದೆ. ಫೆಬ್ರವರಿ ಒಂದರಂದು ಪಾಲೂರು, ಕೊಟ್ಟಮುಡಿ ಮತ್ತಿತರ ಭಾಗಗಳಲ್ಲಿ ಮಳೆಯಾಗಿತ್ತು. ಆ ಬಳಿಕ, ಚೆಯ್ಯಂಡಾಣೆ, ಮರಂದೋಡ ಗ್ರಾಮಗಳಲ್ಲಿ ಗುರುವಾರ ಸಂಜೆ ಮಳೆಯಾಗಿದೆ. ಶನಿವಾರ ಸುರಿದ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾಫಿ ಹೂಗಳಿಗೆ ಧಕ್ಕೆಯಾಗಲಿದೆ ಎಂಬ ಚಿಂತೆ ಬೆಳೆಗಾರರದ್ದು.

ADVERTISEMENT

ಹಲವೆಡೆ ವರ್ಷದ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಸಿದ್ದವಾಗಿದ್ದು, ಕಾಫಿ ಬೆಳೆಗಾರರು ಹೂ ಅರಳಿಸುವತ್ತ ಮುಂದಾಗಿದ್ದಾರೆ. ಕಾವೇರಿ ನದಿ ತೀರದ ತೋಟಗಳಿಗೆ ಬೆಳೆಗಾರರು ತುಂತುರು ನೀರಾವರಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಬರುವ ಮಳೆ ಕಾಫಿಯ ಹೂ ಮಳೆಯೆಂದೇ ಕೃಷಿ ವಲಯದಲ್ಲಿ ಜನಪ್ರಿಯ. ಆದರೆ, ಫೆಬ್ರವರಿ ತಿಂಗಳ ಅಂತ್ಯದಲ್ಲಿ ಸುರಿದ ಮಳೆ ಅಲ್ಪಮಳೆ ಕೆಲವು ಬೆಳೆಗಾರರನ್ನು ತುಂತುರು ನೀರಾವರಿಗೆ ಮೊರೆ ಹೋಗುವಂತೆ ಮಾಡಿದೆ.

ನಾಪೋಕ್ಲು ವ್ಯಾಪ್ತಿಯಲ್ಲಿ ರೋಬಸ್ಟಾ ಕಾಫಿ ಕೊಯ್ಲು ಅಂತಿಮ ಹಂತದಲ್ಲಿದ್ದು, ಕಾಫಿ ಕೊಯ್ಲು ಮುಗಿಯುತ್ತಿದ್ದಂತೆ ಮುಂದಿನ ವರ್ಷದ ಕಾಫಿ ಫಸಲನ್ನು ನಿರ್ಧರಿಸುವ ಕಾಫಿಯ ಮೊಗ್ಗುಗಳು ಮಳೆರಾಯನಿಗಾಗಿ ಕಾದು ಕುಳಿತಿವೆ. ಸಾಮಾನ್ಯವಾಗಿ ಹೂ ಅರಳಿಸುವ ಬೇಸಿಗೆ ಮಳೆ ಮಾರ್ಚ್ ತಿಂಗಳಲ್ಲಿ ಬೀಳುತ್ತವೆ. ಆ ಸಮಯದಲ್ಲಿ ಹೂ ಅರಳುವುದನ್ನು ಕಾಣುವುದು ಸಾಮಾನ್ಯ.

ಹೂ ಮಳೆ ಬೀಳುವುದು ಮಾರ್ಚ್‌ಗಿಂತಲೂ ತಡವಾದಲ್ಲಿ ಕಾಫಿ ಉತ್ಪಾದನೆಗೆ ತೀವ್ರ ಹಿನ್ನೆಡೆ ಉಂಟಾಗುತ್ತದೆ ಎಂದು ಭಾವಿಸಲಾಗುತ್ತದೆ. ನೀರಿನ ಆಶ್ರಯವುಳ್ಳವರು ತುಂತುರು ನೀರಾವರಿ ಮೂಲಕ ನೀರೊದಗಿಸಿ ಉತ್ತಮ ಫಸಲು ಬರುವಂತೆ ನೋಡಿಕೊಳ್ಳುತ್ತಾರೆ.

ಈ ವರ್ಷ ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಅಲ್ಪ ಮಳೆ ಬೆಳೆಗಾರರನ್ನು ಚಿಂತೆಗೆ ದೂಡಿದೆ. ಅಲ್ಪಸ್ವಲ್ಪ ಮಳೆಯಾದ ಕೆಲವು ಭಾಗಗಳಲ್ಲಿ ತುಂತುರು ನೀರಾವರಿ ವ್ಯವಸ್ಥೆಗೆ ಬೆಳೆಗಾರರು ಮುಂದಾಗಿದ್ದು ಕಾಫಿ ಮೊಗ್ಗು ಅರಳಿಸುವತ್ತ ಬೆಳೆಗಾರರು ಚಿತ್ತ ಹರಿಸಿದ್ದಾರೆ. ಇನ್ನೆರಡು-ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಕಾಫಿ ಫಸಲಿಗೆ ಧಕ್ಕೆಯಾಗಲಿದೆ ಎಂಬುದು ಮಳೆಯನ್ನಾಶ್ರಯಿಸಿದ ಬೆಳೆಗಾರರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.