ಮಡಿಕೇರಿ: ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಗುರುವಾರ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಅಭ್ಯರ್ಥಿ ಅಮಿನ್ ಮೊಯಿಸಿನ್ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಎ.ವಿ ಶಾಲೆಯಿಂದ ನಡೆದ ರ‍್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾದರು. ಪಕ್ಷದ ಧ್ವಜಗಳನ್ನು ಹಿಡಿದ ಅವರು ಪಕ್ಷದ ಪರ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಅಭ್ಯರ್ಥಿ ಹಾಗೂ ನಗರಸಭೆ ಸದಸ್ಯ ಅಮಿನ್ ಮೊಯಿಸಿನ್, ‘ಎಸ್‌ಡಿಪಿಐ ಸ್ಪರ್ಧೆಯಿಂದ ರಾಜಕೀಯ ಪಕ್ಷಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗೆಲುವು ನಿಶ್ಚಿತ. ಈ ಬಾರಿ ಜನ ಬೆಂಬಲ ನಮಗಿದೆ’ ಎಂದರು.
ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ಶೋಷಿತ ಸಮುದಾಯದವರನ್ನು ಒಳಗೊಂಡ ಪಕ್ಷ ಎಸ್‌ಡಿಪಿಐ. ಕಳೆದ ಒಂದೂವರೆ ದಶಕಗಳಿಂದ ಸಾಕಷ್ಟು ಹೋರಾಟ ನಡೆಸಿದೆ. ಈ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿದೆ ಎಂದು ಹೇಳಿದರು.
ಬಡವರ ಹೆಸರು ಹೇಳಿಕೊಂಡು ಬಂದ ಪಕ್ಷಗಳು ಇಂದು ಮಾರಾಟದ ಸರಕಾಗಿವೆ. ಹಾಗಾಗಿ, ಎಸ್‌ಡಿಪಿಐ ಚುನಾವಣೆಗೆ ಸ್ಪರ್ಧಿಸಿದೆ. ನಮ್ಮ ಸ್ಪರ್ಧೆಯಿಂದ ಯಾರಿಗೋ ಲಾಭವಾಗು ತ್ತದೆ, ಯಾರಿಗೋ ನಷ್ಟವಾಗುತ್ತದೆ ಎಂಬುದು ಸುಳ್ಳು ಎಂದರು.
ಸದ್ಯ, ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸುತ್ತಿದೆ. ವಿಧಾನಸಭಾ ಚುನಾವಣೆಯ ನಂತರ ಸರ್ಕಾರ ರಚಿಸುವಲ್ಲಿ ಪಕ್ಷ ಪ್ರಮುಖ ಸ್ಥಾನ ನಿಭಾಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ಲ ಅಡ್ಕರ್ ಪ್ರಧಾನ ಕಾರ್ಯದರ್ಶಿ ಬಷೀರ್, ಉಪಾಧ್ಯಕ್ಷೆ ನಾಗರತ್ನಾ, ಅಸೆಂಬ್ಲಿ ಅಧ್ಯಕ್ಷ ಉಸ್ಮಾನ್, ಪಾಲಿಕೆ ಸದಸ್ಯರಾದ ಮೇರಿ ವೆಗಾಸ್, ನೀಮಾ ಹರ್ಷದ್, ಗ್ರಾಮ ಪಂಚಾಯಿತಿ ಸದಸ್ಯ ಬಷೀರ್ ಇದ್ದರು.
ಅಮಿನ್ ಮೊಯಿಸಿನ್ ಅವರು ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ: ಚರಾಸ್ತಿ ₹ 25,08,273, ಪತ್ನಿ ಹೆಸರಿನಲ್ಲಿ ₹ 27,63,530, ಸ್ಥಿರ ಆಸ್ತಿ ಮೌಲ್ಯ ₹ 19,00,000.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.