ADVERTISEMENT

ಶನಿವಾರಸಂತೆ: ವಾಯ್ಸ್ ರೆಕಾರ್ಡ್, ಅಭ್ಯಾಸ ಕಾರ್ಡ್‌ನಿಂದ ಶಿಕ್ಷಣ

ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಶ.ಗ.ನಯನತಾರಾ
Published 16 ಜುಲೈ 2020, 13:22 IST
Last Updated 16 ಜುಲೈ 2020, 13:22 IST
ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಾಯ್ಸ್ ರೆಕಾರ್ಡ್ ಮತ್ತು ಅಭ್ಯಾಸ ಕಾರ್ಡ್ ರಚನೆಯ ಮೂಲಕ ಕಲಿಯುವ ಪ್ರಯತ್ನದಲ್ಲಿರುವುದು
ಶನಿವಾರಸಂತೆ ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಾಯ್ಸ್ ರೆಕಾರ್ಡ್ ಮತ್ತು ಅಭ್ಯಾಸ ಕಾರ್ಡ್ ರಚನೆಯ ಮೂಲಕ ಕಲಿಯುವ ಪ್ರಯತ್ನದಲ್ಲಿರುವುದು   

ಶನಿವಾರಸಂತೆ: ಆನ್‌ಲೈನ್ ಕ್ಲಾಸ್ ಬೇಕು-ಬೇಡಗಳ ಚರ್ಚೆಯ ನಡುವೆ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಾಯ್ಸ್ ರೆಕಾರ್ಡ್ ಮತ್ತು ಅಭ್ಯಾಸ ಕಾರ್ಡ್ ಮೂಲಕ ವಿನೂತನವಾಗಿ ಶಿಕ್ಷಣ ನೀಡಲಾಗುತ್ತಿದೆ.

ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಲ್ಲಿ ಒತ್ತಡ ಉಂಟಾಗುತ್ತದೆ. ಕಣ್ಣಿನ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ, ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಗ್ರಹಿಸಲು ಕಷ್ಟಸಾಧ್ಯ ಎಂದು ಚರ್ಚೆ ನಡೆಯುತ್ತಿದೆ. ಇದನ್ನು ಮನಗಂಡ ಶಾಲೆಯ ಶಿಕ್ಷಕ ಸತೀಶ್‌, ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಕೇವಲ ಧ್ವನಿಯನ್ನು ಕೇಳಿಸಿಕೊಂಡು ತಮಗೆ ನೀಡಿರುವ ಅಭ್ಯಾಸ ಕಾರ್ಡ್‌ಗಳನ್ನು ಇಟ್ಟುಕೊಂಡು ಕಲಿಯುವ ವ್ಯವಸ್ಥೆ ಕಲ್ಪಿಸಿದ್ದಾರೆ.

‘ಮುಳ್ಳೂರು ಶಾಲೆಯಲ್ಲಿ 25 ವಿದ್ಯಾರ್ಥಿಗಳಿದ್ದು, ಜೂನ್ ತಿಂಗಳಿನಿಂದಲೇ ಈ ಮಾದರಿಯನ್ನು ಅನುಸರಿಸಲಾಗುತ್ತಿದ್ದು, ಪ್ರಸಕ್ತ ವರ್ಷದ ನಿಗದಿತ ಪಠ್ಯಗಳನ್ನೂ ಪೂರೈಸಲಾಗಿದೆ. ತೆರೆದ ಪುಸ್ತಕ ಮಾದರಿಯಲ್ಲಿ ಕಿರು ಪರೀಕ್ಷೆಗಳನ್ನೂ ನಡೆಸಲಾಗಿದೆ.ಮೊಬೈಲ್ ವ್ಯವಸ್ಥೆ ಇಲ್ಲದ ಮಕ್ಕಳಿಗೂ ಅಭ್ಯಾಸ ಕಾರ್ಡ್‌ಗಳನ್ನು ತಲುಪಿಸಿ ಅದರಲ್ಲಿ ಬರೆಯಲು ಪ್ರೋತ್ಸಾಹಿಸಲಾಗುತ್ತಿದೆ‘ ಎನ್ನುತ್ತಾರೆ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷ ಸತೀಶ್‌.

ADVERTISEMENT

ಬೋಧನಾ ವಿಧಾನ: ಪ್ರತಿ ತರಗತಿಯ ವ್ಯಾಟ್ಸ್‌ಆ್ಯಪ್‌ ಗುಂಪು ರಚನೆ ಮಾಡಲಾಗಿದ್ದು, ಅದರಲ್ಲಿ ಆಯಾ ತರಗತಿಯ ವಿಷಯಗಳಿಗೆ ಸಂಬಂಧಿಸಿದಂತೆ ಒಂದೇ ಕಾರ್ಡ್‌ನಲ್ಲಿ ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಆ ದಿನದ ಕಲಿಕಾಂಶಗಳ ಪ್ರಮಾಣಕ್ಕೆ ಅನುಗುಣವಾಗಿ ದಿನ, ವಾರ ಹಾಗೂ ತಿಂಗಳ ಕಾರ್ಡ್ ಎಂಬ ಮೂರು ಮಾದರಿಯ ಕಾರ್ಡುಗಳನ್ನು ರಚಿಸಲಾಗಿದೆ. ಈ ಕಾರ್ಡಿನ ಫೋಟೋವನ್ನು ವ್ಯಾಟ್ಸ್‌ಆ್ಯಪ್‌ ಮಾಡಲಾಗುತ್ತದೆ. ಜತೆಗೆ ಆ ಕಾರ್ಡಿನಲ್ಲಿರುವ ಕಲಿಕಾಂಶವನ್ನು ವಾಯ್ಸ್ ರೆಕಾರ್ಡ್ ಮಾಡಿ ಕಳಿಸಲಾಗುತ್ತಿದೆ. ಮಕ್ಕಳು ಒಂದೆರೆಡು ಬಾರಿ ಅದನ್ನು ಕೇಳಿಸಿಕೊಂಡು ನಂತರ ಪೋಷಕರ ಸಹಾಯದಿಂದ ನೋಟ್ ಬುಕ್‌ನಲ್ಲಿ ಬರೆದುಕೊಳ್ಳುತ್ತಾರೆ ಎಂದು ಸತೀಶ್ ಮಾಹಿತಿ ನೀಡಿದರು.

‘ಮಕ್ಕಳು ಕೇವಲ ಕೇಳಿಸಿಕೊಳ್ಳಲು ಮಾತ್ರ ಮೊಬೈಲ್ ಬಳಸುತ್ತಾರೆ. ಸಂಜೆ ಪ್ರತಿ ತರಗತಿಯ ವಿದ್ಯಾರ್ಥಿಗಳೊಂದಿಗೆ 30 ನಿಮಿಷ ‘ಕಾನ್ಪರೆನ್ಸ್ ಕಾಲ್ ಟೀಚಿಂಗ್‌‘ ಮೂಲಕ ವಿದ್ಯಾರ್ಥಿಗಳೊಂದಿಗೆ ಕಲಿಕಾಂಶದ ಬಗ್ಗೆ ಚರ್ಚಿಸಲಾಗುತ್ತದೆ. ಪಠ್ಯದ ಅಂತ್ಯದಲ್ಲಿ ತೆರೆದ ಪುಸ್ತಕ ಮಾದರಿಯಲ್ಲಿ ಕಿರು ಪರೀಕ್ಷೆ ಮಾಡಿ ಮೌಲ್ಯ ಮಾಪನವನ್ನೂ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಮುಖ್ಯಶಿಕ್ಷಕ ಮಂಜುನಾಥ್‌ ಅವರ ಪ್ರೋತ್ಸಾಹವಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.